Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ (Dibburahalli Grama Panchayat) ವ್ಯಾಪ್ತಿಯ ಬೈಯ್ಯಪ್ಪನಹಳ್ಳಿಯಲ್ಲಿ ಮೊಟ್ಟೆ ಕೋಳಿ ಪಾರಂ ನಿರ್ಮಾಣಕ್ಕಾಗಿ ಗ್ರಾಮಸ್ಥರ ವಿರೋಧದ ನಡುವೆಯೂ ಗ್ರಾಮ ಪಂಚಾಯಿತಿಯು ಪರವಾನಗಿಯನ್ನು ನೀಡಲು ಮುಂದಾಗಿರುವುದರ ವಿರುದ್ದ ಗ್ರಾಮಸ್ಥರು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ (Protest) ನಡೆಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯ ಬೈಯ್ಯಪ್ಪನಹಳ್ಳಿ ಬಳಿ ಮೊಟ್ಟೆಯ ಕೋಳಿ ಪಾರಂ ನಿರ್ಮಾಣ ಮಾಡಲು ಎನ್‌ಒಸಿ ನೀಡುವಂತೆ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಗೆ ವ್ಯಕ್ತಿಯೋರ್ವ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕೆರೆಯ ಅಂಚಿನಲ್ಲಿ ಕೋಳಿ ಪಾರಂ ನಿರ್ಮಾಣವಾಗುವುದರಿಂದ ಕೆರೆಯ ನೀರು ಹಾಗೂ ಪರಿಸರ ಕಲುಷಿತಗೊಳ್ಳುತ್ತದೆ ಎನ್ನುವ ಆತಂಕದಲ್ಲಿ ಬೈಯ್ಯಪ್ಪನಹಳ್ಳಿ ಗ್ರಾಮಸ್ಥರು ಕೋಳಿಪಾರಂ ನಿರ್ಮಾಣಕ್ಕೆ ಅಡ್ಡಿಪಡಿಸಿ ಪರವಾನಗಿ ನೀಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೂ ದಿಬ್ಬೂರಹಳ್ಳಿ ಪಂಚಾಯಿತಿಯಿಂದ ಪರವಾನಗಿ ನೀಡುವ ಕೆಲಸ ನಡೆದಿದೆ. ಇದರಿಂದ ಕುಪಿತಗೊಂಡ ಬೈಯ್ಯಪ್ಪನಹಳ್ಳಿ ಗ್ರಾಮಸ್ಥರು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಬೈಯ್ಯಪ್ಪನಹಳ್ಳಿ ಗ್ರಾಮದ ಪಂಚಾಯಿತಿ ಸದಸ್ಯರೂ ಆದ ಡಾ.ಧನಂಜಯರೆಡ್ಡಿ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿ, ಯಾವುದೆ ಕಾರಣಕ್ಕೂ ಕೋಳಿ ಪಾರಂ ನಿರ್ಮಾಣಕ್ಕೆ ಬಿಡುವುದಿಲ್ಲ. ಪಂಚಾಯಿತಿಯವರು ಅಕ್ರಮವಾಗಿ ಪರವಾನಗಿ ನೀಡಲು ಮುಂದಾಗಿದ್ದು ಇದನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗಡಿಗಳ ಟ್ರೇಡ್ ಲೈಸನ್ಸ್‌ಗೆ ಅಧಿಕ ಶುಲ್ಕ ನಿಗಧಿಪಡಿಸಿದ್ದಾರೆ. ಅಂಗನವಾಡಿ ಕಟ್ಟಡ ನಿರ್ಮಿಸಿದ್ದರೂ ಅದರ ಬಿಲ್ಲಿನ ಹಣ ನೀಡದೆ ಸತಾಯಿಸುತ್ತಿದ್ದಾರೆ. ಇಲ್ಲಿ ಅಧ್ಯಕ್ಷೆಯ ಬದಲಿಗೆ ಸದಸ್ಯ ಡಿ.ಪಿ.ನಾಗರಾಜ್ ಅವರೆ ಸರ್ವಾಧಿಕಾರಿಯಂತೆ ವರ್ತಿಸಿ ಬೇರೆಲ್ಲಾ ಸದಸ್ಯರ ಅಭಿಪ್ರಾಯವನ್ನು ಪರಿಗಣಿಸದೆ ಏಕ ಚಕ್ರಾಧಿಪತ್ಯ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಪರವಾನಗಿ ನೀಡಲು ನಡೆಸಿರುವ ಎಲ್ಲ ಪತ್ರ ವ್ಯವಹಾರದ ಬಗ್ಗೆಯೂ ಮರು ಪರಿಶೀಲನೆಗೆ ಆದೇಶಿಸುವುದಾಗಿ ಭರವಸೆ ನೀಡಿದರು. ಕಾನೂನಿಂತೆ ಕ್ರಮ ಜರುಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಮುಖಂಡರಾದ ಡಾ.ಧನಂಜಯರೆಡ್ಡಿ, ಡಿ.ಜಿ.ರಾಮಚಂದ್ರ, ಅನುರಾಧಕೃಷ್ಣಮೂರ್ತಿ, ವೆಂಕಟರತ್ನಮ್ಮವೆಂಕಟೇಶ್, ಆವಲರೆಡ್ಡಿ, ವೆಂಕಟಲಕ್ಷ್ಮಮ್ಮ, ಮಂಜುನಾಥ್ ಪ್ರತಿಭಟನೆಯ ನೇತೃತ್ವವಹಿಸಿದ್ದರು.