ನಗರದ ಶ್ರೀ ವೆಂಕಟೇಶ್ವರ ಸಿನಿಮಾಸ್ ಚಿತ್ರಮಂದಿರಕ್ಕೆ ಪೊಗರು ಚಲನಚಿತ್ರ ತಂಡ ಶುಕ್ರವಾರ ಭೇಟಿ ನೀಡಿತ್ತು. ನಾಯಕನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರ್ದೇಶಕ ನಂದಕಿಶೋರ್ “ಪೊಗರು” ಚಲನಚಿತ್ರದ ವಿಜಯಾತ್ರೆ ಪ್ರಯುಕ್ತ ಶಿಡ್ಲಘಟ್ಟದ ಶ್ರೀವೆಂಕಟೇಶ್ವರ ಸಿನಿಮಾಸ್ ಚಿತ್ರ ಮಂದಿರಕ್ಕೆ ಆಗಮಿಸಿದ್ದರು.
ಧ್ರುವ ಸರ್ಜಾ ಅಭಿಮಾನಿಗಳು ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರದೊಂದಿಗೆ ತಮ್ಮ ನಾಯಕ ನಟನನ್ನು ಸ್ವಾಗತಿಸಿದರು.
ಅಭಿಮಾನಿಗಳು ತಯಾರಿಸಿದ 148 ಕೇ ಜಿ ಕೇಕನ್ನು ಕತ್ತರಿಸಿ ಮಾತನಾಡಿದ ಧ್ರುವ ಸರ್ಜಾ, “ಕನ್ನಡ ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ವೀಕ್ಷಿಸುವ ಮೂಲಕ ಕನ್ನಡ ಸಿನಿಮಾ ರಂಗವನ್ನು ಪ್ರೋತ್ಸಾಹಿಸಿ ಮತ್ತು ಬೆಳೆಸಿ. ಪೊಗರು ಚಿತ್ರ ಗ್ರಾಮೀಣ ಸೊಗಡಿನ ಚಿತ್ರವಾಗಿದ್ದು, ತಾಲ್ಲೂಕಿನ ಜನತೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿ ಹರಸುವಂತೆ ಮನವಿ ಮಾಡಿದರು.
ರಾಜ್ಯಾದ್ಯಂತ ಈ ಚಲನಚಿತ್ರಕ್ಕೆ ಒಳ್ಳೆಯ ರೀತಿಯಲ್ಲಿ ಸ್ಪಂದಿನೆ ಸಿಕ್ಕಿದ್ದು ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಚಿತ್ರದ ನಿರ್ದೇಶಕ ನಂದಕಿಶೋರ್ ಮಾತನಾಡಿ, ಚಲನಚಿತ್ರ ಬಿಡುಗಡೆ ಸಂದರ್ಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಒಳ್ಳೆಯ ಚಿತ್ರವನ್ನು ಜನತೆ ವೀಕ್ಷಿಸಿ ಜನರು ಬೆಂಬಲ ವ್ಯಕ್ತಪಡಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಜನತೆ ಅತಿ ಹೆಚ್ಚಾಗಿ ವೀಕ್ಷಿಸುವ ಮೂಲಕ ಶತದಿನೋತ್ಸವ ಆಚರಿಸುವಂತೆ ಮಾಡಬೇಕು ಎಂದರು .
ಚಿತ್ರದ ನಿರ್ಮಾಪಕ ಬಿ.ಕೆ. ಗಂಗಾಧರ್, ಟಿ ಆನಂದ್, ವೆಂಕಟೇಶ್ವರ ಸಿನಿಮಾಸ್ ಚಿತ್ರ ಮಂದಿರದ ಮಾಲೀಕ ಎಸ್.ಪ್ರಕಾಶ್, ಸಿದ್ದೇಶ್ವರ ಥಿಯೇಟರ್ ಮಾಲೀಕ ಟಿ.ಆನಂದ್, ಗಣೇಶ್, ಕಾರ್ತಿಕ್ ಹಾಗು ಅಪಾರ ಅಭಿಮಾನಿಗಳು ಹಾಜರಿದ್ದರು.