ಧರ್ಮಸ್ಥಳ ಯೋಜನೆಯ ಜನಪರ ಕಾರ್ಯಕ್ರಮಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಲು ಸಂಸ್ಥೆಯ ಕಾರ್ಯಕರ್ತರ ಶ್ರಮ ಶ್ಲಾಘನೀಯವಾದದ್ದು ಎಂದು ಶಿಡ್ಲಘಟ್ಟ ನಗರದ ಸಬ್ ಇನ್ಸ್ ಪೆಕ್ಟರ್ ಸತೀಶ್ ರವರು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಿಡ್ಲಘಟ್ಟ ನಗರದ ಆಯ್ದ ಬಡ ಕುಟುಂಬಗಳಿಗೆ ಅಗತ್ಯ ಆಹಾರ ವಸ್ತುಗಳ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು.
ಸಮಾಜ ಸೇವೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾತ್ರ ಅತ್ಯಂತ ಕಾಳಜಿಯಿಂದ ಕೂಡಿದ್ದು ಇದರ ಉಪಯೋಗವನ್ನು ಸಾಕಾಷ್ಟು ಕುಟುಂಬಗಳು ಪಡೆದುಕೊಳ್ಳುವಂತಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ನಗರದ 45 ಕಡು ಬಡವ ಕುಟುಂಬಗಳಿಗೆ ಆಹಾರದ ಕಿಟ್ ನ್ನು ವಿತರಿಸಲಾಯಿತು.
ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ನೊಂದವರ ಪಾಲಿಗೆ ಆಶಾಕಿರಣವಾಗಿದ್ದು ಕೋವಿಡ್ ಎರಡನೆ ಅಲೆಯ ಸಂಕಷ್ಟದ ಈ ಸಮಯದಲ್ಲಿ ಸೋಂಕಿತರ ಪ್ರಯಾಣಕ್ಕಾಗಿ ರಾಜ್ಯದಾದ್ಯಂತ ಉಚಿತ ವಾಹನ ವ್ಯವಸ್ಥೆ, ಕೋವಿಡ್ ಕೇರ್ ಸೆಂಟರ್ ಗಳಿಗೆ ಉಚಿತ ಆಮ್ಲಜನಕ ಒದಗಣೆ, 300 ಆಕ್ಸಿಜನ್ ಕಾನ್ಸಂಟ್ರೇಟರ್, ಆಕ್ಸಿಜನ್ ವೆಂಟಿಲೇಟರ್, ಹಸಿದವರಿಗೆ ಊಟ ಆಹಾರದ ಕಿಟ್ ಗಳನ್ನು ರಾಜ್ಯಾದ್ಯಂತ ವಿತರಿಸಿದ್ದು ಕಡು ಬಡ ಕುಟುಂಬಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮಗಳ ಮೂಲಕ ಆಸರೆಯಾಗಿದ್ದು ಧರ್ಮಸ್ಥಳದ ಧರ್ಮಾಧಿಕಾರಿಯವರ ಸಮಾಜಮುಖಿ ಮಾನವೀಯ ಗುಣಗಳು ಎಷ್ಟೋ ಬಡ ಅಶಕ್ತ ಕುಟುಂಬಗಳಿಗೆ ಶಕ್ತಿಯನ್ನು ನೀಡಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಆ ಎಂ ತ್ಯಾಗರಾಜ್ ಮಾತನಾಡಿ ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ರಮಗಳು ನೂರಾರು. ಇಂತಹ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕೂಡಾ ನಮ್ಮ ಸೌಭಾಗ್ಯ. ಕೊರೋನಾ ಮಹಾಮಾರಿಯಿಂದ ಕೂಲಿ ಕೆಲಸವಿಲ್ಲದೆ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಕುಟುಂಬಗಳಿಗೆ ಸಂಸ್ಥೆಯು ಆಸರೆಯಾಗಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಸುರೇಶ್ ಹಿತ್ತಲಹಳ್ಳಿ ಮಾತನಾಡಿ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಂಸ್ಥೆಯೂ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಸಾವಿರಾರು ಕುಟುಂಬಗಳಿಗೆ ಸಂಸ್ಥೆ ದಾರಿದೀಪವಾಗಿದೆ ಎಂದರು.
ಈ ಸಂದರ್ಭ ಪೋಲಿಸ್ ಅಧಿಕಾರಿ ನಾಗೇಶ್ ಮಂಜು ರೆಡ್ಡಿ ಯೋಜನೆಯ ಕಾರ್ಯಕರ್ತರಾದ ನವೀನ್ ದಿನೇಶ್ ಹರೀಶ್ ರವರು ಉಪಸ್ಥಿತರಿದ್ದರು.