Malamachanahlli, Sidlaghatta : ರಾಜಕೀಯವನ್ನು ಬದಿಗೊತ್ತಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುತ್ತಿದ್ದೇನೆ. ಪಕ್ಷಬೇಧ ಮರೆತು ಎಲ್ಲಾ ತಾಲ್ಲೂಕುಗಳ ಅಭಿವೃದ್ಧಿಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಸಹಕಾರ ನೀಡುತ್ತಿದ್ದೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿಯಲ್ಲಿ ಮಂಗಳವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ್ ಮಿಷನ್ ನ “ಮನೆಮನೆಗೆ ಗಂಗೆ” ಯೋಜನೆಯನ್ನು ತಾಲ್ಲೂಕಿನ 133 ಗ್ರಾಮಗಳಲ್ಲಿ ಒಟ್ಟು 76 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ, 48 ಮಂದಿ ನಿವೇಶನರಹಿತರಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
“ಮನೆಮನೆಗೆ ಗಂಗೆ” ಯೋಜನೆಯ ಶೇ 45 ರಷ್ಟು ಹಣ ಕೇಂದ್ರ ಸರ್ಕಾರ ನೀಡಿದರೆ, ಉಳಿದ ಶೇ 55 ರಷ್ಟು ಹಣ ರಾಜ್ಯ ಸರ್ಕಾರ ಭರಿಸುತ್ತಿದೆ. ಮನೆಯ ಮುಂದಿನ ನಲ್ಲಿಗೆ ಮೀಟರ್ ಅಳವಡಿಸುವುದನ್ನು ಕಂಡು ಯಾರೂ ಭಾಯಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಆಯಾ ಗ್ರಾಮ ಪಂಚಾಯಿತಿಯ ವಿವೇಚನೆಯ ಮೇರೆಗೆ ಹಣ ಸಂಗ್ರಹಣೆ ನಡೆಯುತ್ತದೆ. 15 ವರ್ಷಗಳು ನಿವೇಶನವನ್ನು ಪರಬಾರೆ ಮಾಡಬಾರದು ಎಂಬ ಉದ್ದೇಶದಿಂದ, ನಿವೇಶನರಹಿತರಿಗೆ ಹಕ್ಕುಪತ್ರದ ಮೂಲ ಪ್ರತಿಗಳನ್ನು ನೀಡುತ್ತಿಲ್ಲ. ಅದರ ಮೂಲ ಪ್ರತಿಗಳು ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಗ್ರಾ.ಪಂ ಯಲ್ಲಿರುತ್ತವೆ ಎಂದು ಹೇಳಿದರು.
ಹೈಟೆಕ್ ಮಾರುಕಟ್ಟೆ :
ಶಿಡ್ಲಘಟ್ಟದಲ್ಲಿ ಶಾಸಕರ ಒತ್ತಾಸೆ ಹಾಗೂ ಸಹಕಾರದಿಂದ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಸ್ಥಳ ಗುರುತಿಸಿದ್ದು, ಸಧ್ಯದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. 170 ಕೋಟಿಯ ಈ ಯೋಜನೆಯ ಹಣ ಹಂತಹಂತವಾಗಿ ಸರ್ಕಾರದಿಂದ ಬಿಡುಗಡೆಯಾಗುತ್ತದೆ ಎಂದರು.
ಒಳಚರಂಡಿ :
ಶಿಡ್ಲಘಟ್ಟ ನಗರದಲ್ಲಿ ಒಳಚರಂಡಿ ಯೋಜನೆಗಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು 30 ಕೋಟಿ ಅನುದಾನ ನೀಡಿದ್ದಾರೆ. ನಗರದ ನೈರ್ಮ್ಯಲ್ಯೀಕರಣಕ್ಕೆ ಇದು ವೇಗ ನೀಡುತ್ತದೆ ಎಂದರು.
ಅಂಬೇಡ್ಕರ್ ಭವನ :
ಶಿಡ್ಲಘಟ್ಟ ಶಾಸಕರ ಮನವಿಯ ಮೇರೆಗೆ ನಗರೋತ್ಥಾನ ಯೋಜನೆಯಲ್ಲಿ ನಾಲ್ಕೂವರೆ ಕೋಟಿ ಹಣವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ವಿನಿಯೋಗಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರು.
ಶಿಡ್ಲಘಟ್ಟ ತಾಲ್ಲೂಕಿನ ಅತಿ ದೊಡ್ಡ ಕೆರೆಯಾದ ರಾಮಸಮುದ್ರ ಕೆರೆಯಿಂದ ನಗರಕ್ಕೆ ನೀರು ಹರಿಸುವ ಯೋಜನೆಯಿದೆ. ಅದಕ್ಕೆ ಸುಮಾರು 120 ಕೋಟಿ ಬೇಕಾಗುತ್ತದೆ. ಅದಕ್ಕಾಗಿಯೇ ಕೆ.ಸಿ.ವ್ಯಾಲಿಯ ನೀರನ್ನು ರಾಮಸಮುದ್ರ ಕೆರೆಗೆ ಹರಿಸಬಾರದು ಎಂದು ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರಕ್ಕೆ ನೀರು ಹರಿಸುವ ಈ ಯೋಜನೆ ಮಾಡಲಾಗುವುದು ಎಂದು ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಮೂವರು ಫಲಾನುಭವಿಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಒಂದು ಲಕ್ಷದ ಪೋಸ್ಟ್ ಆಫೀಸ್ ಬಾಂಡ್ ವಿತರಿಸಲಾಯಿತು.
ಶಾಸಕ ಬಿ.ಎನ್.ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ಲೋಕೇಶ್, ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಮುನಿರಾಜ, ಪಿ.ಡಿ.ಒ ಶೈಲಜ, ಬಂಕ್ ಮುನಿಯಪ್ಪ, ತಾದೂರು ರಘು, ರಾಜಶೇಖರ್, ರವಿ, ಹುಜಗೂರು ರಾಮಣ್ಣ, ಗಂಜಿಗುಂಟೆ ಮೂರ್ತಿ, ಡಾ.ಧನಂಜಯರೆಡ್ಡಿ, ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ ಹಾಜರಿದ್ದರು.