ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಡುಮಕ್ಕಳಿಗೆ ಶೌಚಾಲಯವಿಲ್ಲದೆ ಮಕ್ಕಳು ಬಯಲಿಗೆ ಹೋಗುವ ಪರಿಸ್ಥಿತಿಯಿದೆ. ಗ್ರಾಮ ಪಂಚಾಯಿತಿಯವರ ನಿರ್ಲಕ್ಷ್ಯದಿಂದ ಗಂಡು ಮಕ್ಕಳ ಶೌಚಾಲಯವನ್ನು ಪೂರ್ಣಗೊಳಿಸದೇ ಬೀಗ ಜಡಿದಿರುವುದರಿಂದ ಮಕ್ಕಳಿಗೆ ತೊಂದರೆಯಾಗಿದೆ.
ಕಳೆದ ಸಾಲಿಗಿಂತ ಈ ಬಾರಿ ಸುಮಾರು 25 ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ದಾಖಲಗಿದ್ದು, ಒಟ್ಟಾರೆ 60 ವಿದ್ಯಾರ್ಥಿಗಳು ಈ ಶಾಲೆಯಲ್ಲಿದ್ದಾರೆ. ಪ್ರತಿದಿನ ಗಂಡು ಮಕ್ಕಳು ಸಾಲಾಗಿ ಬೆನ್ನ ಹಿಂದೆ ಕೈಕಟ್ಟಿಕೊಂಡು ಪೆರೇಡ್ ಗೆ ಹೋಗುವ ರೀತಿಯಲ್ಲಿ ಗ್ರಾಮದಲ್ಲಿ ಮೂತ್ರ ವಿಸರ್ಜನೆಗೆ ಹೋಗುವುದನ್ನು ಜನರು ನೋಡುವಂತಾಗಿದೆ.
ಈ ಗಂಡು ಮಕ್ಕಳು ಮೂತ್ರ ವಿಸರ್ಜನೆಗೆ ಹೋಗುವ ಸ್ಥಳವಾದರೂ ಗಿಡಗಂಟೆಗಳಿಂದ ಕೂಡಿದ ಪಾರ್ಥೇನಿಯಂ ವನವಾಗಿದ್ದು, ಕ್ರಿಮಿಕೀಟಗಳೋ ಅಥವಾ ಹುಳುಹುಪ್ಪಟೆಯೋ ಕಡಿದು ತೊಂದರೆಯಾದರೆ ಯಾರು ಹೊಣೆ ಎನ್ನುತ್ತಾರೆ ಗ್ರಾಮಸ್ಥರು.
ಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಶೌಚಾಲಯವಿದೆ. ಆದರೆ ಪಿಟ್ ಗೆ ಇನ್ನೂ ಸಂಪರ್ಕ ಕೊಡದಿರುವುದರಿಂದ ಅದಕ್ಕೆ ಬೀಗ ಜಡಿಯಲಾಗಿದೆ. ಮಕ್ಕಳು ಕೈ ತೊಳೆಯುವ ನೀರು ಹರಿದು ಹೋಗಲು ಸೋಪ್ ಪಿಟ್ ಅನ್ನು ನರೇಗಾ ಯೋಜನೆಯಡಿ 17 ಸಾವಿರ ರೂ ವೆಚ್ಚದಲ್ಲಿ ಮಾಡಲಾಗಿದೆ. ಅದರ ಫಲಕವನ್ನು ಹಾಕಲಾಗಿದೆ. ಆದರೆ ಸಂಪೂರ್ಣ ಪೂರ್ಣಗೊಳಿಸದಿರುವುದರಿಂದ ತ್ಯಾಜ್ಯದ ನೀರು ಶಾಲೆಯ ಮುಂದೆಯೇ ಹರಿದು ಹೋಗುತ್ತಿದೆ. ಅದನ್ನು ತುಳಿದುಕೊಂಡೇ ಮಕ್ಕಳು ಹೋಗುವ ಪರಿಸ್ಥಿತಿಯಿದೆ.
“ನಾವು ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಜೊತೆಗೂಡಿ ಮಕ್ಕಳ ದಾಖಲಾತಿಯನ್ನು ಹೆಚ್ಚಳ ಮಾಡಿದ್ದೇವೆ. ನಮ್ಮ ಶಾಲೆಯಲ್ಲಿ ಗಂಡುಮಕ್ಕಳ ಶೌಚಾಲಯವನ್ನು ಪೂರ್ಣಗೊಳಿಸಿ ಅದರ ಬೀಗವನ್ನು ಕೊಡಿ ಎಂದು ಗ್ರಾಮ ಪಂಚಾಯಿತಿಯವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ನಮ್ಮ ಶಾಲೆಯ ಗಂಡು ಮಕ್ಕಳು ಬಯಲಿಗೆ ಹೋಗಬೇಕಾಗಿದೆ. ನಮಗಿಲ್ಲಿ ಸೋಪ್ ಪಿಟ್, ಗಂಡುಮಕ್ಕಳ ಶೌಚಾಲಯ ಮತ್ತು ಕಾಂಪೌಂಡ್ ಅನ್ನು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಗ್ರಾಮ ಪಂಚಾಯಿತಿಯವರು ತ್ವರಿತವಾಗಿ ಪೂರ್ಣಗೊಳಿಸಿ ಕೊಡಬೇಕು” ಎನ್ನುತ್ತಾರೆ ಶಿಕ್ಷಕ ಮಂಜುನಾಥ್.
ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಸುಧಾಮಣಿ ಅವರನ್ನು ಕೇಳಿದಾಗ, “ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಇಲ್ಲ ಎಂದು ಯಾರೂ ನನಗೆ ಹೇಳಿಲ್ಲ. ಇತ್ತೀಚೆಗಷ್ಟೇ ನಾನು ಈ ಪಂಚಾಯಿತಿಗೆ ಬಂದಿದ್ದೇನೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವೆನು” ಎಂದು ಹೇಳಿದರು.