ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಶ್ರೀ ಮಳ್ಳೂರಾಂಭ ದೇವಾಲಯದಿಂದ ಡಿಸೆಂಬರ್ ಪೌರ್ಣಮಿಯಂದು ನಡೆಯುವ ರಥೋತ್ಸವದ ಪೂರ್ವಭಾವಿ ಸಿದ್ಧತೆಗಳ ಗ್ರಾಮಸ್ಥರ ಸಭೆಯಲ್ಲಿ ಸೋಮವಾರ ತಹಶೀಲ್ದಾರ್ ಬಿ.ಎಸ್.ರಾಜೀವ್ ಭಾಗವಹಿಸಿದ್ದರು.
ಹಿಂದಿನ ವರ್ಷ ಕೊರೊನಾ ಸೋಂಕು ಇದ್ದಿದ್ದರಿಂದ ರಥೋತ್ಸವ ನಡೆಸಲು ಸರ್ಕಾರ ಅನುಮತಿ ನೀಡಿರಲಿಲ್ಲ. ಈ ಬಾರಿ ಹೆಚ್ಚಿನ ಜನಸ್ತೋಮ ಇಲ್ಲದೆ ರಥೋತ್ಸವವನ್ನು ಸರಳವಾಗಿ ಆಚರಿಸಬೇಕೆಂದು ತಹಶೀಲ್ದಾರ್ ಬಿ.ಎಸ್.ರಾಜೀವ್ ತಿಳಿಸಿದರು.
ರಥೋತ್ಸವ ಮುಗಿದಮೇಲೆ ಶಿಥಿಲವಾಗಿರುವ ಶ್ರೀ ಮಳ್ಳೂರಾಂಭ ದೇವಾಲಯವನ್ನು ಗ್ರಾಮಸ್ಥರ ಸಹಯೋಗದಲ್ಲಿ, ಧರ್ಮಸ್ಥಳದ ಸಹಾಯ ನಿಧಿಯನ್ನು ಸಹ ಪಡೆದುಕೊಂಡು ದೇವಾಲಯ ಸರಿಪಡಿಸಿಕೊಳ್ಳಲು ಸೂಚಿಸಿದರು.
ಈ ಬಾರಿ ರಥೋತ್ಸವವನ್ನು ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ಎಂದಿನಂತೆ ನಡೆಸಿಕೊಂಡು ಹೋಗಲು ಮತ್ತು ದೇವಾಲಯ ಸುತ್ತ ಕಾಂಪೌಂಡ್ ನಿರ್ಮಿಸಿಕೊಳ್ಳಲು ಹಾಗೂ ಉದ್ಯಾನವನವನ್ನು ಗ್ರಾಮ ಪಂಚಾಯಿತಿಯ ನರೇಗಾ ಯೋಜನೆ ಅಡಿ ನಿರ್ಮಿಸಿಕೊಳ್ಳಲು ಗ್ರಾಮಸ್ಥರಿಗೆ ಸಲಹೆ ನೀಡಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ಹಿರಿಯ ವಕೀಲ ಸುಬ್ರಮಣ್ಯಪ್ಪ, ಗ್ರಾಮದ ಹಿರಿಯರಾದ ವೆಂಕೋಬರಾವ್, ಬಚ್ಚಪ್ಪ, ಅಕ್ಕಲಪ್ಪ, ಮುನಿರಾಜು, ವಿ. ಮುನಿರಾಜುಗೌಡ, ಸಿ.ಎಂ. ಸೊಣ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್, ರೆಡ್ಡಿ ಸ್ವಾಮಿ, ಈರಪ್ಪ, ಶ್ರೀನಿವಾಸ್, ಅಶೋಕ್, ಎಂ. ವೆಂಕಟೇಶ್, ಶ್ರೀರಾಮ ಹಾಜರಿದ್ದರು.