ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಶ್ರೀ ಮಳ್ಳೂರಾಂಭ ದೇವಾಲಯ ಬಳಿ ಉಟ್ಲು ಉತ್ಸವ ನಡೆಯಿತು. ದೇವಸ್ಥಾನದ ಮುಂಭಾಗದಲ್ಲಿರುವ ಸುಮಾರು 20 ಅಡಿ ಎತ್ತರದ ಕಂಬದ ಮೇಲೆ ವೃತ್ತಾಕಾರದ ಉಟ್ಲು ಮಂಟಪಕ್ಕೆ ವಸ್ತ್ರ ಮತ್ತು ಹೂಗಳಿಂದ ಅಲಂಕರಿಸಲಾಗಿತ್ತು.
ದೇವರಮಳ್ಳೂರು ಗ್ರಾಮದ ಕೂತಲು ಕೃಷ್ಣಪ್ಪ ಅವರ ಮಕ್ಕಳಿಂದ ಉಟ್ಲು ಉತ್ಸವ ಕಾರ್ಯಕ್ರಮ ಪ್ರತಿ ವರ್ಷ ನಡೆಯುತ್ತಿದ್ದು, ಹೋಮ ಪೂಜಾ ಕಾರ್ಯಕ್ರಮಗಳನ್ನು ಆಂಜನಪ್ಪ ನಡೆಸಿಕೊಟ್ಟರು.
ಉಟ್ಲು ಮಂಟಪಕ್ಕೆ ವಸ್ತ್ರ ವಿನ್ಯಾಸ ಮಾಡಿ 5 ಸಣ್ಣ ಗಾತ್ರದ ಗೋಣಿ ಚೀಲಗಳಲ್ಲಿ 5 ದಿಕ್ಕಿಗೂ ತೆಂಗಿನಕಾಯಿಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ಕಂಬದ ಮೇಲೆ ಉಟ್ಲುವಿನಲ್ಲಿ ಇಬ್ಬರು ಯುವಕರು ಕುಳಿತು ಜೋರಾಗಿ ಕಾಯಿಗಳನ್ನು ತಿರುಗಿಸಿದರು.
ನಾಲ್ಕರಿಂದ ಐದು ಮಂದಿ ಯುವಕರು ತೆಂಗಿನಕಾಯಿಗಳನ್ನು ಉದ್ದನೆಯ ಕೋಲಿನಿಂದ ಒಡೆಯಲು ಪ್ರಯತ್ನಿಸಿ ಸುಸ್ತಾಗುತ್ತಿದ್ದ ಪರಿ ಮನರಂಜಿಸಿ, ನಗೆಗಡಲನ್ನೇ ಸೃಷ್ಟಿಸಿತ್ತು.
ದೇಗುಲದ ಮುಂಬಾಗದಲ್ಲಿ ತಲೆ ಎತ್ತಿದ್ದ ಪೂಜಾ ಸಾಮಗ್ರಿ, ತಿಂಡಿ ತಿನಿಸು, ಆಟಿಕೆ ವಸ್ತುಗಳು ಸೇರಿದಂತೆ ವಿವಿಧ ಬಗೆಯ ಮಳಿಗೆಗಳಲ್ಲಿ ವ್ಯಾಪಾರ ಕಂಡುಬಂತು. ಬುರಗು, ಬತಾಸು, ಸಿಹಿ ಮತ್ತು ಕುರುಕಲು ತಿಂಡಿ ತಿನಿಸುಗಳ ವ್ಯಾಪಾರ ಕಂಡುಬಂತು.
ಕೃಷ್ಣಪ್ಪನವರ ಕುಟುಂಬದವರು, ಕೆ.ಎಸ್. ಕೆಂಪಣ್ಣ, ಎಸ್, ಮಂಜುನಾಥ್, ಆನಂದ್, ಊರಿನ ಗ್ರಾಮಸ್ಥರು ಮುಖಂಡರು ಯುವಕರು ಹಾಜರಿದ್ದರು