Devaramallur, sidlaghatta : ಗ್ರಾಮ ಸಭೆಗಳಲ್ಲಿ ಅಧಿಕಾರಿಗಳು ಹಾಗೂ ಸದಸ್ಯರು ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಭಾಗಿ ಆದಾಗಲೆ ನಾವು ಜನ ಸಾಮಾನ್ಯರ ಕೆಲಸ ಕಾರ್ಯ ಹಾಗೂ ಸಮಸ್ಯೆಗಳಿಗೆ ಸ್ಪಂಸಲು ಸಾಧ್ಯವಾಗಲಿದೆ. ಗ್ರಾಮಸಭೆಗಳನ್ನು ನಿರ್ಲಕ್ಷಿಸಿದಲ್ಲಿ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿದಂತೆ ಎಂದು ದೇವರಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಮುನಿಶಾಮಪ್ಪ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾಜಿಕ ಪರಿಶೋಧನೆ ಮತ್ತು ಗ್ರಾಮಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮಾಹಿತಿ ಇದ್ದರೂ ಸಹ ಸಾಕಷ್ಟು ಅಧಿಕಾರಿಗಳು ಗ್ರಾಮಸಭೆಗೆ ಹಾಜರಾಗಿದ್ದರಲ್ಲದೆ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಗೈರು ಹಾಜರಿ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಮಳ್ಳೂರು, ಸೊಣ್ಣೇನಹಳ್ಳಿ, ಬೊಮ್ಮನಹಳ್ಳಿ, ತಲದುಮ್ಮನಹಳ್ಳಿ, ವೀರಾಪುರ, ಬೂದಾಳ, ಇದ್ಲೂಡು, ಬೊಮ್ಮನಹಳ್ಳಿ ಗ್ರಾಮಗಳ ಗ್ರಾಮಸ್ಥರಿಂದ ನರೇಗಾ ಯೋಜನೆಯಡಿ ಕೈಗೊಳ್ಳಬಹುದಾದ ವಯುಕ್ತಿಕ ಕಾಮಗಾರಿ ಕುರಿ ಮೇಕೆ ದನದ ಶೆಡ್‌ಗಳ ನಿರ್ಮಾಣ ಸೇರಿ ಹಲವು ಕಾಮಗಾರಿಗಳ ಪಟ್ಟಿಯನ್ನು ಮಾಡಲಾಯಿತು.
ರೇಷ್ಮೆ ಇಲಾಖೆ ಸೇರಿದಂತೆ ನಾನಾ ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ಸಭೆಯಲ್ಲಿ ನೀಡಲಾಯಿತು. ದೇವರಮಳ್ಳೂರು ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಒದಗಿಸುವಂತೆ, ವೀರಾಪುರದಲ್ಲಿ ಮಂಜುನಾಥ್ ಎನ್ನುವವರ ನಿವೇಶನದ ಖಾತೆ ಮಾಡಿಕೊಡುವಂತೆ, ಸೊಣ್ಣೇನಹಳ್ಳಿ ಗ್ರಾಮದಲ್ಲಿ ಬಾಕಿ ಇರುವ ದನದ ಶೆಡ್‌ನ ಬಿಲ್ ಹಣ ಬಿಡುಗಡೆ ಮಾಡುವುದು ಸೇರಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾದವು.
ಪ್ರಭಾರಿ ಪಿಡಿಒ ಗೋಪಾಲ್, ರೇಷ್ಮೆ ಇಲಾಖೆಯ ಜಗದೇವಪ್ಪ ಗುಗ್ರಿ, ಉಪಾಧ್ಯಕ್ಷೆ ಅನಸೂಯಮ್ಮ, ಸದಸ್ಯರಾದ ಡಿ.ವೆಂಕಟೇಶ್, ಪವಿತ್ರ, ಲಕ್ಷ್ಮಿ, ಮುನಿರಾಜಪ್ಪ, ವೆಂಕಟರೋಣಪ್ಪ, ಎನ್.ವೆಂಕಟೇಶ್, ಸುಗುಣಮ್ಮ, ಶಿವಣ್ಣ, ಲಕ್ಷ್ಮಿ, ಗ್ರಾಮಸ್ಥರು ಹಾಜರಿದ್ದರು.