ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ “ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ” ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಅಗತ್ಯ ಮೂಲಭೂತ ಸವಲತ್ತುಗಳನ್ನು ಪಡೆದುಕೊಳ್ಳಲು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮದ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದ ಸಮಸ್ಯೆಗಳನ್ನು ಜನರ ಬಳಿಗೇ ಹೋಗಿ ಆಲಿಸಿ ಬಗೆಹರಿಸಿಕೊಡುವ ನಿಟ್ಟಿನಲ್ಲಿ ತಾಲೂಕು ಆಡಳಿತದಿಂದ ಗ್ರಾಮವಾಸ್ತವ್ಯವನ್ನು ಆಯೋಜಿಸಲಾಗಿದ್ದು ಪಿಂಚಣಿ, ಪವತಿಖಾತೆ, ಖಾತೆ ತಿದ್ದುಪಡಿ, ಸ್ಮಶಾನ, ನಿವೇಶನ ನೀಡುವುದು, ರಸ್ತೆ ಸಮಸ್ಯೆ ಅಥವಾ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸುವುದು, ಇವೆಲ್ಲವನ್ನೂ ಒಳಗೊಂಡಂತೆ ಗ್ರಾಮವಾಸ್ತವ್ಯದ ಮೂಲಕ ಹಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನ ನಡೆಸಲಾಗುವುದು ಎಂದರು.
ತಹಸೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸವಲತ್ತು ಸಿಗಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಮೂಲಕ ಜನರೊಂದಿಗೆ ಬೆರೆತು ಅಗತ್ಯ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕ ಪ್ರತ್ನ ಮಾಡಲಾಗುತ್ತಿದೆ. ಇಂದಿನ ಗ್ರಾಮ ವಾಸ್ತವ್ಯದಲ್ಲಿ ಪ್ರಮುಖವಾಗಿ ಗ್ರಾಮದ ಮಳ್ಳೂರಾಂಭ ದೇವಾಲಯದ ಸುತ್ತಲಿನ ನಾಲ್ಕು ಎಕರೆ ಜಾಗ ಸರ್ವೇ ಕಾರ್ಯ ನಡೆಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವುದು ಸೇರಿದಂತೆ ಗ್ರಾಮಸ್ಥರ ಮನವಿ ಮೇರೆಗೆ ಗ್ರಾಮದಲ್ಲಿ ಪಶು ಆಸ್ಪತ್ರೆ ನಿಮಾಣ ಮಾಡಲು ಸ್ಥಳ ನಿಗಧಿ, ಸಾರ್ವಜನಿಕ ಸ್ಮಶಾನ ಸೇರಿದಂತೆ ಶಾಲಾ ಕಟ್ಟಡ ನಿರ್ಮಾಣ ಹಾಗು ಆಟದ ಮೈದಾನಕ್ಕಾಗಿ ಸ್ಥಳ ನಿಗಧಿ ಮಾಡಲು ಶಾಸಕರು ಸೂಚನೆ ನಿಡಿದ್ದು ಅದರಂತೆ ಸ್ಥಳ ನಿಗಧಿ ಮಾಡಲಾಗುವುದು. ದೇವರ ಮಳ್ಳೂರು ಗ್ರಾಮದಲ್ಲಿರುವ ಸರ್ಕಾರಿ ಕುಂಟೆ, ಕಾಲುವೆ ಮತ್ತಿತರ ಸರ್ಕಾರಿ ಜಾಗಗಳನ್ನು ತೆರವು ಗೊಳಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದರು.
ದೇವರ ಮಳ್ಳೂರಿನ ಪುರಾಣ ಪ್ರಸಿದ್ದ ಮಳ್ಳೂರಂಭ ದೇವಾಲಯ ಸೆರಿದಂತೆ ಗ್ರಾಮದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಶಾಸಕರು ಹಾಗು ತಹಸೀಲ್ದಾರ್‌ರು ಗ್ರಾಮದಲ್ಲಿ ಸಂಚರಿಸಿ ಕೆಲವಾರು ಮನೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ವಿಚಾರಿಸುವ ಜೊತೆಗೆ ಜನರ ಅಹವಾಲನ್ನು ಪಡೆದು ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು. ಕಂದಾಯ ಇಲಾಖೆಯಿಂದ ಗ್ರಾಮದ ಒಬ್ಬರಿಗೆ ಹಕ್ಕುಪತ್ರ, ೩೮ ಫಲಾನುಭವಿಗಳಿಗೆ ಪಿಂಚಿಣಿ ಹಾಗು ೨೦ ಮನೆಗಳಿಗೆ ಕಂದಾಯ ದಾಖಲೆಗಳನ್ನು ವಿತರಿಸಿದರೆ ರೇಷ್ಮೆ ಇಲಾಖೆಯಿಂದ ರೈತರಿಗೆ ಗುರುತಿನ ಚೀಟಿ, ಸಹಾಯಧನ ಸೇರಿದಂತೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು.
ತಾ.ಪಂ ಇಓ ಬಿ.ಕೆ.ಚಂದ್ರಕಾಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಗ್ರಾ.ಪಂ ಅಧ್ಯಕ್ಷ ಕೆಂಪೇಗೌಡ, ರೇಷ್ಮೆ ಇಲಾಖೆಯ ತಿಮ್ಮರಾಜು, ಆರ್.ಐ.ಪ್ರಶಾಂತ್, ಗ್ರಾಮ ಲೆಕ್ಕಿಗರಾದ ಲಾರೆನ್ಸ್, ನಾಗರಾಜ್, ಗ್ರಾ.ಪಂ ಸದಸ್ಯರೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.