ಜಿಲ್ಲೆಯ ಎರಡು ಅಥವಾ ಮೂರು ಹಳ್ಳಿಗಳಲ್ಲಿ ಪ್ರತಿವಾರವೂ ಸಂಜೆ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುತ್ತಿದ್ದೇವೆ. ಪ್ರತಿಯೊಂದು ಹಳ್ಳಿಯಲ್ಲಿನ ಪ್ರತಿಯೊಬ್ಬರಿಗೂ ಈ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ ಎಂದು ಡಾ.ಫಣೀಂದ್ರ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಇಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವುದಲ್ಲದೆ, ಚಿಕಿತ್ಸೆಗೆಂದು ಬರುವ ಎಲ್ಲರಿಗೂ ಆರೋಗ್ಯ ಕಾರ್ಡ್ ಮಾಡಿಕೊಡುತ್ತೇವೆ. ಅದರೊಂದಿಗೆ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಗೆ ಬಂದು ಉಚಿತವಾಗಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯಬಹುದಾಗಿದೆ. ಮಕ್ಕಳ ವೈದ್ಯರು, ಸ್ತ್ರೀರೋಗ ತಜ್ಞರು, ಕಿವಿ ಮೂಗು ಮತ್ತು ಗಂಟಲಿನ ವೈದ್ಯರು, ಕಣ್ಣಿನ ವೈದ್ಯರು ಇದ್ದಾರೆ. ಸಾಮಾನ್ಯ ಶಸ್ತ್ರಚಿಕಿತ್ಸೆಗಳು, ದಂತ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಪ್ರತಿದಿನ ನೂರಕ್ಕೂ ಹೆಚ್ಚು ಮಂದಿ ಬಿಪಿ ಮತ್ತು ಶುಗರ್ ಗಾಗಿ ಎರಡು ತಿಂಗಳಿಗಾಗುವಷ್ಟು ಮಾತ್ರೆ ಉಚಿತವಾಗಿ ಪಡೆಯುತ್ತಾರೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ರೆಡ್ ಕ್ರಾಸ್ ಸಂಸ್ಥೆ ವಿ.ಎನ್.ರವಿಕುಮಾರ್, ತಾಲ್ಲೂಕು ಕಾರ್ಯದರ್ಶಿ ರೆಡ್ ಕ್ರಾಸ್ ಸಂಸ್ಥೆ ಗುರುರಾಜ್, ಡಾ. ಫಣಿಂದ್ರ, ಡಾ.ಪ್ರಿಯಾಂಕ ಡಾ. ಸುಬ್ಬಲಕ್ಷ್ಮಿ, ದೇವರಮಳ್ಳೂರು ಗ್ರಾಮದ ವೆಂಕೋಬರಾವ್, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್, ಚನ್ನಕೃಷ್ಣ, ಅನುಷಾ ಹಾಜರಿದ್ದರು.