Sidlaghatta : ಡೆಂಗ್ಯು ತಡೆಗಟ್ಟಲು ಅದರ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕವಾದ ಮಾಹಿತಿ ನೀಡುವ ಅಗತ್ಯವಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಡೆಂಗ್ಯು ಬಗ್ಗೆ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಸಂಚರಿಸಲು ರೂಪಿಸಿದ ಡೆಂಗ್ಯು ಜಾಗೃತಿ ರಥಕ್ಕೆ ಭಾನುವಾರ ನಗರದ ತಾಲ್ಲೂಕು ಕಚೇರಿಯ ಮುಂಭಾಗ ಚಾಲನೆ ನೀಡಿ ಅವರು ಮಾತನಾಡಿದರು.
ಡೆಂಗ್ಯು ಕೇವಲ ಜ್ವರ ಅಲ್ಲ, ಅದು ಸೋಂಕು ಹೊಂದಿದ ಸೊಳ್ಳೆಯ ಮೂಲಕ ಹರಡುವ ವೈರಸ್ ಜ್ವರ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಅಗತ್ಯವಿದೆ. ತಾಲ್ಲೂಕಿನ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸುತ್ತಲಿನ ಹಳ್ಳಿಗಳಿಗೆ ಡೆಂಗ್ಯು ಜಾಗೃತಿ ರಥ ಕೊಂಡೊಯ್ದು ಜನರಿಗೆ ಮಾಹಿತಿ ನೀಡಿ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಡೆಂಗ್ಯೂ ಜ್ವರ ಇರುವವರಿಗೆ ನಿರಂತರವಾಗಿ ಸುಸ್ತು ಆಯಾಸ ಬರುತ್ತದೆ ಮತ್ತು ಜ್ವರ ಬಿಟ್ಟು ಬಿಟ್ಟು ಬರುತ್ತದೆ. ಇದರ ಜೊತೆಗೆ ಚರ್ಮದ ಮೇಲೆ ಅಲ್ಲಲ್ಲಿ ಗಾಯಗಳು ಕಂಡುಬರುತ್ತವೆ. ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ನಿಮಗೆ ನೀವೇ ಔಷಧಿ ತೆಗೆದುಕೊಳ್ಳಲು ಹೋಗಬೇಡಿ. ವೈದ್ಯರಿಗೆ ತೋರಿಸಿ ಆನಂತರ ರೋಗ ನಿರ್ಣಯ ಮಾಡಿದ ನಂತರ ಅವರು ನೀಡುವ ಸೂಕ್ತ ಚಿಕಿತ್ಸೆ ಹಾಗೂ ಔಷಧಿಗಳನ್ನು ತೆಗೆದುಕೊಳ್ಳಿ ಎಂದು ಹೇಳಿದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಮುನಿರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ವಿವಿಧ ಜನಪ್ರತಿನಿಧಿಗಳು, ಸಾರ್ವಜನಿಕ ರು ಹಾಜರಿದ್ದರು.