ತಾಲ್ಲೂಕಿನ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಗ್ರಾಮದ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳ ಗೋವಿಂದಗೌಡ ಮಾತನಾಡಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಚೈತನ್ಯ ತುಂಬುವುದು ಹಾಗೂ ಖಾಸಗಿ ವ್ಯಕ್ತಿಗಳ ಬಡ್ಡಿ ಕಿರುಕುಳವನ್ನು ತಪ್ಪಿಸುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ಮೂಲಕ ನೀಡುತ್ತಿರುವ ಬಡ್ಡಿರಹಿತ ಸಾಲದ ಉಪಯೋಗವನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳಬೇಕು ಮತ್ತು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಹೇಳಿದರು.
ಹಣ ಡ್ರಾ ಮಾಡಲು ಮೊಬೈಲ್ ಬ್ಯಾಂಕಿಂಗ್ ವಾಹನ ನಿಮ್ಮ ಮನೆ ಬಾಗಿಲಿಗೆ ಬರುವ ವ್ಯವಸ್ಥೆ ಕಲ್ಪಿಸಲಾಗಿದೆ. ಯಾರೂ ಬೇರಾವುದೇ ಎಟಿಎಂಗೆ ಹೋಗುವ ಅವಶ್ಯಕತೆಯಿಲ್ಲ. ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಲಾ ಒಂದೊಂದು ಲಕ್ಷ ಸಾಲ ನೀಡುವುದಾಗಿ ಹೇಳಿದರು.
ತಾಯಂದಿರು ತಮ್ಮ ಉಳಿತಾಯದ ಹಣವನ್ನು ಸಹಕಾರ ಸಂಘದಲ್ಲಿಯೇ ಠೇವಣಿ ಇಡಬೇಕು. ಡಿಸಿಸಿ ಬ್ಯಾಂಕ್ ಬಡವರ ಹಾಗೂ ಮಹಿಳೆಯರ ಪರವಾಗಿದೆ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಸರ್ಕಾರ ಬರೀ ಆಶ್ವಾಸನೆಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು ಇದರಿಂದ ಯಾವೊಬ್ಬರಿಗೂ ಉಪಯೋಗವಾಗಿಲ್ಲ. ಕೇಂದ್ರ ಸರ್ಕಾರ ಪ್ರತಿಯೊಬ್ಬ ಮತದಾರರಿಗೂ ತಲಾ ಹದಿನೈದು ಲಕ್ಷ ಹಣ ನೀಡುತ್ತೇವೆ ಎಂದು ಹೇಳಿದ್ದ ಆಶ್ವಾಸನೆ ಬರೀ ಆಶ್ವಾಸನೆಯಾಗಿಯೇ ಉಳಿದಿದೆ ಎಂದರು.
ಈ ಸಂದರ್ಭದಲ್ಲಿ ಜಂಗಮಕೋಟೆ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸುಮಾರು 50 ಸ್ವಸಹಾಯ ಸಂಘಗಳಿಗೆ 2 ಕೋಟಿ 26 ಲಕ್ಷ, 63 ಸಾವಿರ ಸಾಲ ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಜಂಗಮಕೋಟೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಮಂಜುಳಮ್ಮ, ಮಾಜಿ ಅಧ್ಯಕ್ಷ ಗಣೇಶ್, ನಿರ್ದೇಶಕರಾದ ಹನುಮಂತಪ್ಪ, ಮುನಿರಾಜು, ಎಚ್.ಎಂ.ಮಂಜುನಾಥಗೌಡ, ಶ್ರೀನಿವಾಸ್, ಅಶ್ವತನಾರಾಯಣ, ಮುನೇಗೌಡ, ಶ್ರೀನಿವಾಸ್, ದೇವರಾಜು, ಪರಮೇಶ್ ಹಾಜರಿದ್ದರು.