ಡಾಲ್ಫಿನ್ ಶಾಲಾ ಆವರಣದಲ್ಲಿ ಶನಿವಾರ ನಡೆದ ಈ.ತಿಮ್ಮಸಂದ್ರ ರೇಷ್ಮೆ ಬೆಳೆಗಾರರ ವ್ಯವಸಾಯ ಸೇವಾ ಸಹಕಾರ ಸಂಘ (ಎಸ್.ಎಫ್.ಸಿ.ಎಸ್) ಬ್ಯಾಂಕ್ ಮೂಲಕ 18 ಮಹಿಳಾ ಸ್ವಸಹಾಯ ಸಂಘಗಳಿಗೆ 82 ಲಕ್ಷ 89 ಸಾವಿರ ರೂಗಳ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಕೊರೊನಾ ಸಂಕಷ್ಟದಲ್ಲಿ ಡಿಸಿಸಿ ಬ್ಯಾಂಕ್ ಜಿಲ್ಲೆಯ ಸುಮಾರು ಇಪ್ಪತ್ತು ಸಾವಿರ ಮಹಿಳೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡುವ ಮೂಲಕ ನೆರವಿಗೆ ನಿಂತಿದೆ. ಪಡೆದ ಸಾಲವನ್ನು ನಿಗತಿತ ಸಮಯಕ್ಕೆ ಕಟ್ಟುವ ಮೂಲಕ ಪುನಃ ಸಾಲವನ್ನು ಪಡೆಯಬಹುದು. ಮಹಿಳೆಯರು ಕುಟುಂಬವನ್ನು ರಕ್ಷಿಸಲು ಇದು ಸಹಾಯವಾಗಲಿದೆ ಎಂದು ಅವರು ತಿಳಿಸಿದರು.
ಡಿಸಿಸಿ ಬ್ಯಾಂಕ್ ಅವಿಭಜಿತ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯಬಡ್ಡಿದರದಲ್ಲಿ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರ ಪಾಲಿಗೆ ಆತ್ಮಬಂಧುವಾಗಿದೆ. ವಾಣಿಜ್ಯ ಬ್ಯಾಂಕುಗಳು, ಲೇವಾದೇವಿಯವರು ಬಡವರಿಗೆ ಸಾಲ ನೀಡುವುದಿಲ್ಲ. ಆದರೆ ಡಿಸಿಸಿ ಬ್ಯಾಂಕ್ ಅಂಥಹವರಿಗೇ ಸಾಲ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳ ಕೈಹಿಡಿದಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, ಬಡತನಕ್ಕೆ ಪಕ್ಷಬೇಧವಿಲ್ಲ. ಮಹಿಳಾ ಆರ್ಥಿಕ ಸಬಲೀಕರಣದ ಈ ಕಾರ್ಯಕ್ರಮಕ್ಕೆ ಯಾವುದೇ ರಾಜಕೀಯ ಪಕ್ಷದವರಾಗಲಿ ನಮ್ಮೊಂದಿಗೆ ಕೈಜೋಡಿಸಿ ಸಹಕಾರ ನೀಡಿ. ರಾಜಕಾರಣ ಬಿಟ್ಟು ಆಲೋಚಿಸೋಣ, ದೀನದಲಿತರ ಪಾಲಿನ ದೇವಾಲಯವಾಗಿ ಬ್ಯಾಂಕ್ ಕೆಲಸ ಮಾಡುತ್ತಿದೆ, ದಿನದ 24 ಗಂಟೆಯೂ ಕೆಲಸ ಮಾಡುತ್ತಿರುವ ಬ್ಯಾಂಕನ್ನು ಉಳಿಸಿ, ಶಕ್ತಿ ತುಂಬಲು ಪಡೆದ ಸಾಲವನ್ನು ಪ್ರಾಮಾಣಿಕತೆಯಿಂದ ಮರುಪಾವತಿಸಿ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜು, ಸುಬ್ರಮಣಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಎಸ್.ಎಫ್.ಸಿ.ಎಸ್ ಕಾರ್ಯನಿರ್ವಾಹಣಾಧಿಕಾರಿ ಅಕ್ಕಲಪ್ಪ, ದೇವರಾಜು, ರಾಜೇಶ್, ಪ್ರಸನ್ನ, ನಾಗರಾಜು, ನವೀನ್, ವೆಂಕರೋಣಪ್ಪ, ನರಸಿಂಹಮೂರ್ತಿ ಹಾಜರಿದ್ದರು.