ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳೊಂದಿಗೆ ಕರೋನ ನಿಯಂತ್ರಣ ಕುರಿತು ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.
ಕೋವಿಡ್ ಸೋಂಕಿತರಿಂದ ದೂರವಾಣಿ ಮೂಲಕ ಮಾಹಿತಿ ಪಡೆದು ಚಿಕಿತ್ಸೆ ನೀಡಬಾರದು ಬದಲಾಗಿ ಕೋವಿಡ್ ಮಾರ್ಗಸೂಚಿಗಳನ್ವಯ ಸೋಂಕಿತರ ಬಳಿಗೆ ತೆರಳಿ ಖುದ್ದು ವೀಕ್ಷಿಸಿ ಆರೋಗ್ಯ ತಪಾಸಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಆರ್. ಲತಾ ಅವರು ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೋಮ್ ಐಸೋಲೇಶನ್ ನಲ್ಲಿ 600ಕ್ಕೂ ಹೆಚ್ಚು ಸೋಂಕಿತರು
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 900ಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿದ್ದು ಅವರಲ್ಲಿ 600ಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಹೋಮ್ ಐಸೋಲೇಶನ್ ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೊಂದು ಜನರಿಗೆ ಅವರ ಕುಟುಂಬದವರ ಸಂಪರ್ಕಕ್ಕೆ ದೂರವಾಗಿ ಪ್ರತ್ಯೇಕವಾದ ಕೊಠಡಿ ಮತ್ತು ಶೌಚಾಲಯ ವ್ಯವಸ್ಥೆ ಇರುವ ಸಂಭವ ಕಡಿಮೆ. ಆದ್ದರಿಂದ ಸ್ಥಳೀಯ ಮಟ್ಟದ ಆರೋಗ್ಯ ಅಧಿಕಾರಿಗಳು ಸೋಂಕಿತರ ಮನೆಗಳಿಗೆ ಖುದ್ದು ಭೇಟಿ ನೀಡಿ ಅವರ ಆರೋಗ್ಯ ಪರಿಸ್ಥಿತಿ, ವಾಸಸ್ಥಳದ ಪರಿಸ್ಥಿತಿಯನ್ನು ಪರಿಶೀಲಿಸಿಕೊಂಡು ಯಾರಿಗೆ ಪ್ರತ್ಯೇಕ ವಾಸ ಮಾಡಲು ವ್ಯವಸ್ಥೆ ಇರುವುದಿಲ್ಲವೋ ಅಂತಹವರನ್ನು ಗ್ರಾಮ ಮತ್ತು ವಾರ್ಡ್ ಮಟ್ಟದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಗಳ ಸದಸ್ಯರುಗಳ ಸಹಯೋಗದಿಂದ ಕೋವಿಡ್ ಆರೈಕೆ ಕೇಂದ್ರಗಳಿಗೆ ಕಡ್ಡಾಯವಾಗಿ ಸ್ಥಳಾಂತರಿಸಬೇಕು. ಈ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕೋವಿಡ್ ನೋಡಲ್ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು. ಆರೋಗ್ಯಾಧಿಕಾರಿಗಳು ಗುರುತಿಸಿದ ಸೋಂಕಿತರು ಆರೈಕೆ ಕೇಂದ್ರಗಳಿಗೆ ಬರಲು ಇಚ್ಚಿಸದಿದ್ದಲ್ಲಿ ಸ್ಥಳೀಯ ಪೊಲೀಸರ ಸಹಾಯ ಪಡೆದು ಪ್ರಕರಣ ದಾಖಲಿಸಿ ಕಡ್ಡಾಯವಾಗಿ ಆರೈಕೆ ಕೇಂದ್ರಗಳಿಗೆ ತಲುಪಿಸುವ ವ್ಯವಸ್ಥೆ ಆಗಬೇಕು ಎಂದರು.
ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸಲು ವಾಹನ ವ್ಯವಸ್ಥೆ
ಹೋಮ್ ಐಸೋಲೇಶನ್ ನಲ್ಲಿ ಇರುವವರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಹಾಗೂ ಗುಣಮುಖರಾದವರನ್ನು ಮನೆಗಳಿಗೆ ತಲುಪಿಸಲು ಅನುಕೂಲವಾಗಲು ಆದಿಚುಂಚನಗಿರಿ ಮಠದ ವತಿಯಿಂದ 6 ಬಸ್ ಗಳನ್ನು ಹಾಗೂ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ 6 ಬಸ್ ಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡಿರುತ್ತಾರೆ. ಈ ವಾಹನಗಳನ್ನು ಪ್ರತಿ ತಾಲ್ಲೂಕಿಗೆ ಎರಡರಂತೆ ಹಂಚಿಕೆ ಮಾಡಿ ಕೋವಿಡ್ ಸೋಂಕಿತರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದರ ಜೊತೆಗೆ ಹಳ್ಳಿಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲಿ ವೈದ್ಯಕೀಯ ಉದ್ದೇಶಗಳಿಗೆ ಕೋವಿಡ್ ರೋಗಿಗಳನ್ನು ಕರೆತರಲು ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಹಾಲಿ ಇರುವ ಆಂಬುಲೆನ್ಸ್ ಗಳ ಜೊತೆಗೆ ಹೆಚ್ಚುವರಿಯಾಗಿ ಪ್ರತಿ ತಾಲ್ಲೂಕಿಗೆ ಮೂರು ಆಂಬುಲೆನ್ಸ್ ವಾಹನಗಳನ್ನು ನೀಡಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಕೋವಿಡ್ ಸೋಂಕು ನಿಯಂತ್ರಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ 22% ಪಾಸಿಟಿವಿಟಿ ರೇಟ್
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಪಾಸಿಟೀವ್ ಪ್ರಮಾಣ ನಮ್ಮ ಜಿಲ್ಲೆಯಲ್ಲಿ ಕಡಿಮೆಯಿದೆ. ಪಾಸಿಟೀವ್ ಪ್ರಮಾಣ ನಮ್ಮ ಜಿಲ್ಲೆಯಲ್ಲಿ ಶೇ 22 ರಷ್ಟಿದೆ. ನನ್ನ ಪ್ರಕಾರ ಅದೂ ಹೆಚ್ಚೇ. ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಾಲ್ಕು ದಿನಗಳ ಕಾಲ ಲಾಕ್ ಡೌನ್ ಮಾಡಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗಿದೆ. ದಯವಿಟ್ಟು ಮನೆಗಳಿಂದ ಹೊರಬರಬೇಡಿ ಎಂದು ಅವರು ಸಾರ್ವಜನಿಕರಲ್ಲಿ ವಿನಂತಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯನ್ನೂ ಮುಚ್ಚಿಸಬೇಕೆಂದಿದ್ದೆ. ಆದರೆ ರೈತರಿಗೆ ತೊಂದರೆಯಾಗುತ್ತದೆಂದು ಆದಷ್ಟು ಬೇಗ ವಹಿವಾಟನ್ನು ಮುಗಿಸುವುದಾಗಿ ಅವರು ವಿನಂತಿ ಮಾಡಿಕೊಂಡದ್ದರಿಂದ ಅನುಮತಿ ನೀಡಿದ್ದೇನೆ ಎಂದರು.
ಜಿಲ್ಲೆಯಲ್ಲಿ ಇಬ್ಬರಿಗೆ ಬ್ಲಾಕ್ ಫಂಗಸ್ ರೋಗ ಲಕ್ಷಣಗಳು
ಚಿಂತಾಮಣಿಯ ಇಬ್ಬರು ಸೋಂಕಿತರಿಗೆ ಬ್ಲಾಕ್ ಫಂಗಸ್ ಲಕ್ಷಣಗಳು ಕಂಡುಬಂದಿದ್ದರಿಂದ ಅವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲೆಡೆ ಕೊರೊನಾ ಕಾರ್ಯಪಡೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮ ಮಟ್ಟದಲ್ಲಿ ಮತ್ತು ನಗರದ ವಾರ್ಡ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆ. ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಎಲ್ಲಾ ರೀತಿಯಿಂದಲೂ ಸನ್ನದ್ಧ
ಯಾವುದೇ ಕಾರಣಕ್ಕೂ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಆರೋಗ್ಯ ಇಲಾಖೆಯವರಿಗೆ ಸೂಚನೆ ನೀಡಿದ್ದೇನೆ. ಕನಿಷ್ಟ ಇಪ್ಪತ್ತು ದಿನಗಳಿಗಾಗುವಷ್ಟು ಔಷಧಿ ದಾಸ್ತಾನು ಇರಲೇಬೇಕು. ಎಲ್ಲಾ ರೀತಿಯಿಂದಲೂ ಸನ್ನದ್ಧರಾಗಿರುವಂತೆ ತಿಳಿಸಿದ್ದೇನೆ.
ಜಿಲ್ಲೆಯಲ್ಲಿ ಈಗಾಗಲೇ ಹತ್ತು ಸಾವಿರ ಹಾಸಿಗೆಗಳ ಕೋವಿಡ್ ಕೇರ್ ಸೆಂಟರುಗಳು ಸರ್ವಸನ್ನದ್ಧವಾಗಿವೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿಯೂ ಈಗ 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಇದ್ದು, ಅದನ್ನು ಒಂದು ಸಾವಿರಕ್ಕೆ ಏರಿಸಲು ಸೂಕ್ತ ಸ್ಥಳಗಳನ್ನು ಗುರುತಿಸಲಾಗಿದೆ.
ಉಪವಿಭಾಗಾಧಿಕಾರಿ ರಘುನಂದನ್, ತಹಶೀಲ್ದಾರ್ ರಾಜೀವ್, ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್, ನಗರಸಭೆ ಆಯುಕ್ತ ಶ್ರೀನಿವಾಸ್, ಡಾ.ವಾಣಿ ಹಾಜರಿದ್ದರು.