Sidlaghatta : ಚುನಾವಣೆಯ ವಿಷಯ ಬಹಳ ಸೂಕ್ಷ್ಮ ಮತ್ತು ಕಾನೂನು ಚೌಕಟ್ಟಿನಲ್ಲಿಯೆ ನಡೆಸಬೇಕಿರುವುದರಿಂದ ಎಲ್ಲ ಕಾರ್ಯದರ್ಶಿಗಳೂ ಎಚ್ಚರಿಕೆಯಿಂದ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಕೋಚಿಮುಲ್ ಹಾಗೂ ಕೆಎಂಎಫ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಕೋಚಿಮುಲ್‌ನ ಆಶ್ರಯದಲ್ಲಿ ನಗರದಲ್ಲಿನ ಕೋಚಿಮುಲ್ ಕಚೇರಿ ಸಭಾಂಗಣದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಹಮ್ಮಿಕೊಂಡಿದ್ದ ಚುನಾವಣಾ ಪೂರ್ವ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಎಲ್ಲ ಗ್ರಾಮಗಳಲ್ಲೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಅವರವರ ಪಕ್ಷಗಳ ಪರ ನಿಲ್ಲುತ್ತಾರೆ. ಎಲ್ಲ ಪಕ್ಷಗಳ ಬೆಂಬಲಿಗರೂ ಇರುತ್ತಾರೆ. ಆದರೆ ನೀವು ಯಾವುದೆ ಪಕ್ಷದ ಪರವಾಗಲಿ ವಿರೋಧವಾಗಲಿ ಗುರ್ತಿಸಿಕೊಳ್ಳಬೇಡಿ.
ನೀವು ನಿಷ್ಪಕ್ಷಪಾತವಾಗಿ ಎಲ್ಲರೊಂದಿಗೂ ಸರಿ ಸಮಾನತೆಯ ಭಾವದಿಂದ ನಡೆದುಕೊಳ್ಳಿ. ಕಾಲ ಕಾಲಕ್ಕೆ ಇಲಾಖೆಯ ಸುತ್ತೋಲೆಗಳನ್ನು ಅಧ್ಯಯನ ಮಾಡಿ. ತಿಳಿಯದಿದ್ದರೆ ಮೇಲಧಿಕಾರಿಗಳನ್ನು ಕೇಳಿ ಅವರಿಂದ ತಿಳಿದುಕೊಳ್ಳಿ ಎಂದರು.
ಯಾರು ನೀತಿ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪಾಲನೆ ಮಾಡುತ್ತಾರೋ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಾರೋ ಅವರಿಗೆ ಯಾವುದೆ ರೀತಿಯ ಸಮಸ್ಯೆ ಎದುರಾಗೊಲ್ಲ. ಸುಗಮವಾಗಿ ಚುನಾವಣೆಯ ಪ್ರಕ್ರಿಯೆಗಳನ್ನು ನಡೆಸಬಹುದು ಎಂದು ಹೇಳಿದರು.
ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಭೀಮೇಶ್ ಮಾತನಾಡಿ, ಸಹಕಾರ ಸಂಘಗಳಲ್ಲಿ ಯಾವುದೆ ಕಾರಣಕ್ಕೂ ರಾಜಕೀಯ ನುಸಳದಂತೆ ಡೇರಿಯ ಮುಖ್ಯ ಕಾರ್ಯನಿರ್ವಾಹಕರು ಕಾರ್ಯನಿರ್ವಹಿಸಬೇಕು. ಸಮಾನ್ಯವಾಗಿ ಎಲ್ಲರೂ ಒಂದೊಂದು ರಾಜಕೀಯ ಪಕ್ಷದಲ್ಲಿ ಗುರ್ತಿಸಿಕೊಂಡಿರುತ್ತಾರೆ.ಆದರೆ ಸಹಕಾರ ಸಂಘದಲ್ಲಿ ಮಾತ್ರ ರಾಜಕೀಯ ಬೆರೆಯದಂತೆ ಎಚ್ಚರಿಕೆವಹಿಸಬೇಕು. ಸಹಕಾರ ವ್ಯವಸ್ಥೆಯಲ್ಲಿ ಎಲ್ಲರಿಗೂ ಅಲ್ಲಿ ಅವಕಾಶಗಳು ಸಿಗುವಂತ ವ್ಯವಸ್ಥೆಯನ್ನು ರೂಪಿಸುವುದು ಮತ್ತು ಮುಂದುವರೆಸಿಕೊಂಡು ಹೋಗುವುದು ನಿಮ್ಮ ಹೊಣೆ ಎಂದರು.
ಸಹಕಾರ ಅಭಿವೃದ್ದಿ ಅಧಿಕಾರಿ ಎಂ.ಮಂಜುನಾಥ್ ಅವರು ಚುನಾವಣಾ ನೀತಿ ನಿಯಮಗಳು, ನೂತನ ಸುತ್ತೋಲೆಗಳ ಬಗ್ಗೆ ವಿವರಿಸಿದರು. ಸಹಕಾರ ಶಿಕ್ಷಣ ನಿಧಿಯ 2,26,940 ರೂಗಳ ಚೆಕ್ಕನ್ನು ಜಿಲ್ಲಾ ಸಹಕಾರ ಒಕ್ಕೂಟಕ್ಕೆ ನೀಡಲಾಯಿತು.
ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್‌ರಾಮಯ್ಯ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ನಾಗರಾಜ್, ಉಪಾಧ್ಯಕ್ಷ ಎನ್.ಕೆ.ಲಕ್ಷ್ಮೀಪತಿ, ಪ್ರಭಾಕರ್, ಕೋಚಿಮುಲ್ ಡಿಎಂ ಡಾ.ಬಿ.ಆರ್.ರವಿಕಿರಣ್, ಸಹಾಯಕ ವ್ಯವಸ್ಥಾಪಕ ಡಾ.ಹರೀಶ್, ಮೇಲ್ವಿಚಾರಕರಾದ ಉಮೇಶ್‌ರೆಡ್ಡಿ, ಜಯಚಂದ್ರ, ಶ್ರೀನಿವಾಸ್, ಶಂಕರ್ ಕುಮಾರ್, ಮಂಜುನಾತ್, ಗುಲಾಬ್ ಜಾನ್, ಶಶಿಕುಮಾರ್, ಎಲ್ಲ ಡೇರಿಗಳ ಕಾರ್ಯದರ್ಶಿಗಳು ಹಾಜರಿದ್ದರು.