ಪಿಂಚಣಿ ಮಾಡಿಸಿಕೊಡುತ್ತೇನೆಂದು ಹೇಳಿ ಒಬ್ಬಂಟಿ ವೃದ್ಧೆಯ ಬಳಿಯಿದ್ದ ಸುಮಾರು 80 ಗ್ರಾಮ್ ಚಿನ್ನ ಮತ್ತು 25 ಸಾವಿರ ರೂ ಹಣವನ್ನು ದೋಚಿರುವ ಘಟನೆ ನಗರದ ದೇಶದಪೇಟೆಯಲ್ಲಿ ನಡೆದಿದೆ.
ದೇಶದಪೇಟೆಯಲ್ಲಿ ಒಬ್ಬರೇ ವಾಸಿಸುತ್ತಿದ್ದ ಗೌರಮ್ಮ ಅವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ಸರ್ಕಾರದಿಂದ ಪ್ರತಿತಿಂಗಳು ಹಣ ಬರುವ ಪಿಂಚಣಿಯನ್ನು ಉಚಿತವಾಗಿ ಮಾಡಿಸಿಕೊಡುತ್ತೇನೆಂದು ಹೇಳಿದ್ದಾನೆ. ಒಡವೆಗಳನ್ನೆಲ್ಲಾ ಬಿಚ್ಚಿಡಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಪ್ರಮಾಣಪತ್ರ ಪಡೆಯಬೇಕು ಎಂದು ಹೇಳಿ ಕರೆದೊಯ್ದಿದ್ದಾನೆ. ಅವರ ಜೊತೆಗೆ ಪಕ್ಕದ ಮನೆ ಮಹಿಳೆಯೂ ಜೊತೆಯಲ್ಲಿ ಹೋಗಿದ್ದಾರೆ. ಆಸ್ಪತ್ರೆಯ ಬಳಿ ಹೋದಾಗ ರೇಷನ್ ಕಾರ್ಡ್ ಮತ್ತಿತರ ದಾಖಲೆಗಳು ಬೇಕೆಂದು ಹೇಳಿದ್ದಾನೆ. ವೃದ್ಧೆ ಗೌರಮ್ಮ ಪಕ್ಕದ ಮನೆ ಮಹಿಳೆಗೆ ಬೀಗದ ಕೈ ಕೊಟ್ಟು, ತಾನಿಲ್ಲೇ ಇರುವೆ ಹೋಗಿ ತನ್ನಿ ಎಂದಿದ್ದಾರೆ. ಅವರ ಮನೆಗೆ ಹೋದಾಗ ಆ ಅಪರಿಚಿತ ವ್ಯಕ್ತಿ ಪಕ್ಕದ ಮನೆ ಮಹಿಳೆಯನ್ನು ಆಕೆಯ ದಾಖಲಾತಿಗಳನ್ನು ತರಲು ಹೇಳಿ ಗೌರಮ್ಮ ಅವರ ಮನೆಯಲ್ಲಿ ಒಡವೆಗಳನ್ನುಮತ್ತು ಹಣವನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ಗೌರಮ್ಮ ತಿಳಿಸಿದ್ದಾರೆ.
ಮರುಕಳಿಸಿದ ಘಟನೆ : ಇದೇ ರೀತಿಯಾಗಿ ಕೆಲ ದಿನಗಳ ಹಿಂದೆ ಶಿಡ್ಲಘಟ್ಟದ ಮುತ್ತೂರು ಬೀದಿಯಲ್ಲಿರುವ ವೃದ್ಧೆಯೊಬ್ಬರನ್ನು ಮೋಸಗೊಳಿಸಿ ಹಣ ಮತ್ತು ಒಡವೆಯನ್ನು ದೋಚಲಾಗಿತ್ತು.
ಒಬ್ಬಂಟಿ ವೃದ್ಧರನ್ನು ಮೋಸಗೊಳಿಸಿ ಹಣ ದೋಚುವ ಜಾಲವನ್ನು ಪೊಲೀಸರು ಭೇದಿಸಬೇಕು. ಕಳ್ಳರನ್ನು ಬಂಧಿಸಬೇಕು. ಹಲವೆಡೆ ರಾತ್ರಿ ವೇಳೆ ಯುವಕರು ವೀಲಿಂಗ್ ಮಾಡುತ್ತಾ ಕಿರುಚಾಡುವುದಕ್ಕೆ ಕಡಿವಾಣ ಹಾಕಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.