ಭಾರತೀಯ ವೈದ್ಯರು ಸಾಕಷ್ಟು ಪರಿಶ್ರಮಪಟ್ಟು ಅತೀಶೀಘ್ರವೇ ಕೊರೊನಾ ತಡೆಗೆ ಲಸಿಕೆಯನ್ನು ಕಂಡುಹಿಡಿದಿದ್ದಾರೆ. ಈಗಾಗಲೇ ಫ್ರಂಟ್‌ಲೈನ್‌ನ ಕೊರೊನಾವಾರಿಯರ್ಸ್, ಹಿರಿಯರು ಪಡೆದಿದ್ದು ಯಶಸ್ವಿಯಾಗಿದೆ. ಇದೀಗ ಸಾಕಷ್ಟು ಪರಿಶ್ರಮದಿಂದ ಕೊರೋನಾ ವಿರುದ್ಧ ಸಮರ ಸಾರಿದ್ದು ಉಚಿತವಾಗಿ ಎಲ್ಲರಿಗೂ ಲಸಿಕೆ ಹಾಕಿಸುವ ಪ್ರಯತ್ನ ನಡೆದಿದೆ. ಕೊರೋನಾ ತಡೆಯುವಲ್ಲಿ ಲಸಿಕೆಯು ರಕ್ಷಾಕವಚವಾಗಿದೆ, ಕೊರೊನಾ ಬಂದ ನಂತರ ಹೆಣಗಾಡುವುದಕ್ಕಿಂತ ಬಾರದಂತೆ ತಡೆಯಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕು ಎಂದು ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಮ್ಮದೇವರಾಜು ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕೋವಿಡ್ ಲಸಿಕೆಯನ್ನು ಪಡೆದ ನಂತರ ಅವರು ಮಾತನಾಡಿದರು.
ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣಕುಮಾರಿ ಮಾತನಾಡಿ, ಈಗಾಗಲೇ ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೊರೊನಾ ತಾಂಡವ ಹೆಚ್ಚುತ್ತಿದ್ದು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗಳ ಮುಂದೆ ಜನರು ಹುಡುಕಿಕೊಂಡು ಬರುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಜನರಲ್ಲಿ ಇನ್ನೂ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ನಿರ್ಲಕ್ಷ್ಯತನ ಎದ್ದು ಕಾಣುತ್ತಿದ್ದು, ಎಲ್ಲರೂ ತಪ್ಪದೇ ಲಸಿಕೆಯನ್ನು ಪಡೆಯಬೇಕು ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಕೊರೋನಾ ನಿಯಂತ್ರಣವೂ ಒಂದು ದೇಶಸೇವೆಯೇ ಆಗಿದ್ದು ರೋಗನಿಯಂತ್ರಣ, ವಿಪತ್ತು ನಿರ್ವಹಣೆಯಲ್ಲಿ ಎಲ್ಲರೂ ಕೈಜೋಡಿಸಬೇಕು. ಲಸಿಕೆಯನ್ನು ಪಡೆದ ನಂತರವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ತಪ್ಪದೇ ಧರಿಸುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳುವ ಬಗೆಗಿನ ತಪ್ಪುಕಲ್ಪನೆಯನ್ನು ವರ್ಜಿಸಿ ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಗ್ರಾಮದಲ್ಲಿ ಪಿಡಿಒ ನೇತೃತ್ವದ ತಂಡವು ಮನೆಮನೆಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ, ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿತು.
ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್‌ಕುಮಾರ್, ನಾರಾಯಣಸ್ವಾಮಿ, ದೇವರಾಜು, ಮಾಜಿ ಸದಸ್ಯೆ ಭಾಗ್ಯಮ್ಮ ಅರುಣ್‌ಕುಮಾರ್, ಆರೋಗ್ಯ ಸಿಬ್ಬಂದಿ ಎನ್.ಆಶಾ, ಮುನಿಲಕ್ಷ್ಮಮ್ಮ, ಭಾಗ್ಯಮ್ಮ, ಅಂಗನವಾಡಿಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಹಾಜದ್ದರು.