ಕೋವಿಡ್ ಹಿನ್ನೆಲೆಯಲ್ಲಿ ಲಾಕ್ಡೌನ್ ಆದನಂತರ ಮುಚ್ಚಿದ ಶಾಲೆಗಳು ಭೌತಿಕ ತರಗತಿಗಳು ಇಲಾಖೆಯ ಆದೇಶದಂತೆ ತೆರೆಯಲ್ಪಡುತ್ತಿವೆ. ಸೋಮವಾರ 6 ರಿಂದ 8ನೇ ತರಗತಿಗಳಿಗೆ ಆರಂಭವಾಗಿದ್ದು, ವಿದ್ಯಾರ್ಥಿಗಳು ಶಾಲೆಗೆ ಉತ್ಸುಕರಾಗಿ ಆಗಮಿಸಿದ ದೃಶ್ಯ ಎಲ್ಲೆಡೆ ಕಂಡುಬಂತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಬೋಧಕ ವರ್ಗದವರು ಗುಲಾಬಿ ಹೂವು ಸಿಹಿತಿಂಡಿ ವಿತರಿಸಿ ಶಾಲೆಗೆ ಸ್ವಾಗತಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ, ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಪರಿವೀಕ್ಷಕಿ ಕೃಷ್ಣಕುಮಾರಿ, ಸಿ.ಆರ್.ಪಿ ರಮೇಶ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತಮ್ಮ ದೇವರಾಜು ಮಕ್ಕಳನ್ನು ಅಧಿಕೃತವಾಗಿ ಸ್ವಾಗತಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ ಮಾತನಾಡಿ, ಲಾಕ್ಡೌನ್ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ತರಗತಿಗಳು ನಡೆಯದ ಕಾರಣ ಕಲಿಕಾ ಕಂದಕ ಏರ್ಪಟ್ಟಿದೆ. ಅದನ್ನು ಹೋಗಲಾಡಿಸಬೇಕಾಗಿದ್ದು ನಮ್ಮ ಮೊದಲ ಕರ್ತವ್ಯವಾಗಿದೆ. ಕಲಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಈಗಾಗಲೇ ಆನ್ಲೈನ್, ಆಫ್ಲೈನ್, ಸಂಯೋಜಿತ ವಿಧಾನಗಳನ್ನು ಬಳಸಿಕೊಳ್ಳಲಾಗಿದ್ದು, ವಾಟ್ಸಾಪ್ ಮೂಲಕ ಅಭ್ಯಾಸ ಪತ್ರಿಕೆಗಳನ್ನು ಕೊಟ್ಟು ಮಕ್ಕಳಲ್ಲಿ ಬಳಕೆಯಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಆದರೂ ಕಲಿಕೆಯನ್ನು ದೃಢಪಡಿಸಲು ಭೌತಿಕ ತರಗತಿಗಳು ಸಹಾಯಕವಾಗಲಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕಿ ಕೃಷ್ಣಕುಮಾರಿ ಮಾತನಾಡಿ, ಈಗಾಗಲೇ ವಿದ್ಯಾರ್ಥಿಗಳಿಗೆ ಇಲಾಖೆಯು ಪಠ್ಯಪುಸ್ತಕಗಳನ್ನು ವಿತರಿಸಿದೆ. ದೂರದರ್ಶನ ತರಗತಿಗಳ ಮೂಲಕ ಪಾಠ ಬೋಧನೆ ನಡೆದಿದೆ. ಜೂನ್, ಜುಲೈ ತಿಂಗಳಿಂದಲೂ ಪೂರ್ವ ಪರೀಕ್ಷೆ, ಪರಿಹಾರ ಬೋಧನೆ ಕೈಗೊಂಡು ಮೂಲಭೂತ ಕೌಶಲಗಳ ಬಗ್ಗೆ ಆದ್ಯತೆ ನೀಡಲಾಗಿದೆ. ಭೌತಿಕ ತರಗತಿಗಳು ಆಗುವುದರಿಂದ ವಿದ್ಯಾರ್ಥಿಗಳು ಕೋವಿಡ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಮಕ್ಕಳ ಕುಟುಂಬಸ್ಥರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಈಗಾಗಲೇ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಿಕ್ಷಕರಿಗೆ ಸೂಚಿಸಿದ್ದು ಭೌತಿಕ ತರಗತಿಗಳು ಯಶಸ್ವಿಯಾಗಲಿವೆ ಎಂದರು.
ಶಿಕ್ಷಕ ಎಚ್. ಎಸ್. ರುದ್ರೇಶ ಮೂರ್ತಿ ಮಾತನಾಡಿ, ರಜಾ ಅವಧಿಯಲ್ಲಿಯೂ ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೇರೇಪಿಸಲಾಗಿದೆ. ಪ್ರಾರಂಭೋತ್ಸವ ದಿನದಂದೇ ಉಚಿತ ಪಠ್ಯಪುಸ್ತಕ, ದಾನಿಗಳಿಂದ ಉಚಿತ ಸಮವಸ್ತ್ರ, ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಇನ್ನು ಮುಂದೆ ಭೌತಿಕ ತರಗತಿಗಳ ಜೊತೆಜೊತೆಗೆ ಆನ್ಲೈನ್ ಮೂಲಕವೂ ಬೋಧಿಸಲಾಗುವುದು. ವಿದ್ಯಾರ್ಥಿಗಳಲ್ಲಿ ಕಲಿಕಾ ನಷ್ಟವಾಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಶಾಲೆಗೆ ಬಾಳೆಕಂದು ಮಾವಿನ ತಳಿರು ತೋರಣ ಕಟ್ಟಿ ರಂಗೋಲಿ ಹಾಕಿ ಅಲಂಕರಿಸಲಾಗಿತ್ತು. ಪ್ರವೇಶದ್ವಾರದಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಿಹಿತಿಂಡಿ, ಉಚಿತ ಮಾಸ್ಕ್ ವಿತರಿಸಿ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ದಾನಿಗಳಿಂದ ಉಚಿತ ಸಮವಸ್ತ್ರ, ಉಚಿತ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಅಧಿಕಾರಿಗಳು ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್, ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಕುಮಾರ್, ನಾರಾಯಣಸ್ವಾಮಿ, ಸಿ.ಆರ್.ಪಿ ರಮೇಶ್ ಕುಮಾರ್, ಆರೋಗ್ಯ ಕಾರ್ಯಕರ್ತರು, ಶಿಕ್ಷಕ ವರ್ಗದವರು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi