ನಗರದ ಮುತ್ತೂರು ಬೀದಿಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಸೋಮವಾರ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಬಡ ಬ್ರಾಹ್ಮಣರು, ಅರ್ಚಕರು, ಅಡುಗೆಯವರು, ಪುರೋಹಿತರು, ಪೊಲೀಸರು ಹಾಗೂ ಕೊರೊನಾ ವಾರಿಯರ್ ಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಎಬಿಡಿ ಗ್ರೂಪ್ಸ್ ಚೇರ್‌ಮನ್ ರಾಜೀವ್‌ಗೌಡ ಮಾತನಾಡಿದರು.
ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ನೆರವಾಗಬೇಕೆಂಬ ನಿಟ್ಟಿನಲ್ಲಿ ತಾಲ್ಲೂಕಿನಾದ್ಯಂತ ಆಹಾರ ಧಾನ್ಯಗಳ ಕಿಟ್ ವಿತರಿಸುವ ಕೆಲಸಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.
ಕೊರೊನಾ ಸಂಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡಲು ಎಬಿಡಿ ಗ್ರೂಪ್ಸ್ ಸದಾ ಸಿದ್ದವಾಗಿದೆ. ಯಾರೂ ಸಹ ಹಸಿವಿನಿಂದ ಬಳಲಬಾರದು ಎಂಬ ಒಂದೇ ಉದ್ದೇಶದಿಂದ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗುತ್ತಿದ್ದು ತಾಲ್ಲೂಕಿನಾದ್ಯಂತ ಸುಮಾರು ಹತ್ತು ಸಾವಿರ ಕಿಟ್ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ದೇಶವನ್ನು ಕೊರೊನಾ ಮುಕ್ತಗೊಳಿಸಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ. ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದು ಜನತೆ ಅನಾವಶ್ಯಕವಾಗಿ ಓಡಾಡದೇ ಸಹಕಾರ ನೀಡಬೇಕು. ಇನ್ನು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಎಲ್ಲರಿಗೂ ತಮ್ಮ ಕೈಲಾದ ಸಹಾಯ ಹಸ್ತ ಚಾಚುತ್ತಿರುವ ಸಮಾಜ ಸೇವಕರ ಕಾರ್ಯ ಶ್ಲಾಘನೀಯ. ಆಹಾರ ದಾನ್ಯಗಳ ವಿತರಣೆ ಜೊತೆಗೆ ಜನತೆಗೆ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಎಬಿಡಿ ಗ್ರೂಪ್ಸ್‌ನ ಗಗನದೀಪ್‌ಸಿಂಗ್, ಮಣಿಕಂಠಶರ್ಮ, ಶ್ರೀನಿವಾಸಬಾಬು, ಸ್ಥಳೀಯ ಮುಖಂಡರಾದ ರಮೇಶ್‌ಬಾಯಿರಿ, ವಿ.ಕೃಷ್ಣ, ಬಿ.ಆರ್.ಅನಂತಕೃಷ್ಣ, ಶರತ್, ಶ್ರೀನಿವಾಸ್, ಗೋಪಿ, ಗುರುರಾಜರಾವ್ ಹಾಜರಿದ್ದರು.