“ಕೋವಿಡ್ ಕೇರ್ ಸೆಂಟರ್ ನಲ್ಲಿ ನಾವು ತುಂಬಾ ಖುಷಿಯಾಗಿದ್ದೆವು. ಊಟ ತುಂಬಾ ಚೆನ್ನಾಗಿತ್ತು. ಒಳ್ಳೆ ಗಾಳಿ, ವಾತಾವರಣ, ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರಿಂದ ನಮಗೆ ಸಿಕ್ಕ ಆತ್ಮಸ್ಥೈರ್ಯ. ಕೊರೊನಾದಿಂದ ಗುಣಮುಖರಾಗಿ ನಾವೀಗ ಮನೆಗಳಿಗೆ ಹೋಗಲು ಬೇಸರವಾಗುತ್ತಿದೆ. ಅಷ್ಟು ಚೆನ್ನಾಗಿ ನಮ್ಮನ್ನು ನೋಡಿಕೊಂಡರು” ಎಂದು ಕೊರೊನಾ ಮುಕ್ತರಾಗಿ ಸೋಮವಾರ ತಮ್ಮ ತಮ್ಮ ಮನೆಗಳಿಗೆ ಹೊರಟ 25 ಮಂದಿಯ ಮಾತುಗಳಿವು.
“ನಮ್ಮ ಮನೆಯ ಬಳಿ ಪೊಲೀಸರು ಮತ್ತು ಆಂಬುಲೆನ್ಸ್ ಬಂದಾಗ ಎಲ್ಲರೂ ನಮ್ಮನ್ನು ವಿಚಿತ್ರವಾಗಿ ಅಪರಾಧಿಗಳನ್ನು ನೋಡುವಂತೆ ನೋಡಿದ್ದರು. ನಾವು ಕಣ್ಣೀರಿಟ್ಟಿದ್ದೆವು. ನಮಗೇ ಯಾಕಪ್ಪ ಭಗವಂತ ಈ ಶಿಕ್ಷೆ ಕೊಟ್ಟೆ ಎಂದು ಮನಸ್ಸಿನಲ್ಲಿಯೇ ರೋಧಿಸಿದ್ದೆವು. ಆದರೆ ಕೋವಿಡ್ ಕೇರ್ ಸೆಂಟರ್ ನಲ್ಲಿ ನಮಗೆಲ್ಲಾ ಧೈರ್ಯ ತುಂಬಿದರು. ಒಳ್ಳೆಯ ಔಷಧಿ, ಆಹಾರ, ಮನಸ್ಸಿಗೆ ನೆಮ್ಮದಿ ಎಲ್ಲವೂ ಸಿಕ್ಕಿತು. ಎಲ್ಲವನ್ನೂ ಮರೆತು ಇಲ್ಲಿನ ವಾತಾವರಣದಲ್ಲಿ ಮರುಜನ್ಮವನ್ನು ಪಡೆದಿದ್ದೇವೆ. ನಮ್ಮನ್ನು ನೋಡಿಕೊಂಡ ಆರೋಗ್ಯ ಸಿಬ್ಬಂದಿ, ಅಡುಗೆಯವರು ಮೊದಲಾದವರನ್ನು ದೇವರೇ ನಮಗಾಗಿ ಕಳುಹಿಸಿದ್ದಂತೆ ಅನಿಸಿತು. ದೇವರು ಎಲ್ಲೋ ಇಲ್ಲ ಅಪರಿಚಿತರಾದರೂ ಮತ್ತೊಬ್ಬ ಮನುಷ್ಯನಿಗೆ ಸಹಾಯ ಮಾಡುವವರಲ್ಲಿ ದೇವರಿರುತ್ತಾರೆ” ಎಂದು ಅವರು ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿದರು.
ಅವರನ್ನು ಬೀಳ್ಕೊಟ್ಟ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, “ಕೊರೊನಾ ಸೋಂಕಿನಿಂದ ಗುಣಪಡಿಸಿಕೊಂಡು ಹೊರಟ ನಿಮ್ಮಗಳ ಜವಾಬ್ದಾರಿ ಹೆಚ್ಚಿರುತ್ತದೆ. ನೆಗೆಟಿವ್ ಬಂತೆಂದು ನೀವು ಎಲ್ಲೆಂದರಲ್ಲಿ ಓಡಾಡಬಾರದು. ಕನಿಷ್ಠ ಏಳು ದಿನಗಳ ಕಾಲ ಮನೆಬಿಟ್ಟು ಹೊರಗೆ ಹೋಗಬೇಡಿ. ಕುಟುಂಬದ ಸದಸ್ಯರೊಡನೆ ಮಾತನಾಡುವಾಗಲೂ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಿ, ಕೈ ಶುಭ್ರವಾಗಿಟ್ಟುಕೊಳ್ಳಿ, ಅಪರಿಚಿತರನ್ನು ಮನೆಗೆ ಸೇರಿಸಬೇಡಿ. ಆರೋಗ್ಯದ ಸಮಸ್ಯೆಗಳು ಬಂದರೆ ಗ್ರಾಮದಲ್ಲಿರುವ ಟಾಸ್ಕ್ ಫೋರ್ಸ್ ಸದಸ್ಯರು ಅಥವಾ ಆಶಾ ಕಾರ್ಯಕರ್ತೆಯರು ಅಥವಾ ವೈದ್ಯರಿಗೆ ಮಾಹಿತಿ ಕೊಡಿ. ಕೋವಿಡ್ ಬಗ್ಗೆ ಇತರರಿಗೂ ಅರಿವು ಮೂಡಿಸಿ” ಎಂದು ಹೇಳಿದರು.
ತಹಶೀಲ್ದಾರ್ ಕೆ.ಅರುಂಧತಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರು ಕೊಂಡಪ್ಪಗಾರಹಳ್ಳಿಯ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಊಟ ಮಾಡಿ, ಅಡುಗೆ ಸಿಬ್ಬಂದಿಯೊಂದಿಗೆ ಮಾತನಾಡಿ ಆಹಾರದ ಗುಣಮಟ್ಟ ಮತ್ತು ರುಚಿಯಲ್ಲಿ ಯಾವುದೇ ರೀತಿಯ ಕುಂದುಂಟಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿ, ಅವರ ಯಾವುದೇ ಸಮಸ್ಯೆಗಳಿದ್ದರೂ ತಾಲ್ಲೂಕು ಆಡಳಿತದ ಮೂಲಕ ಬಗೆಹರಿಸುವುದಾಗಿ ಭರವಸೆ ನೀಡಿದರು.