ತಾಲ್ಲೂಕಿನ ಸುಂಡ್ರಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರನ್ನಾಗಿ ತಾಲ್ಲೂಕು ಆಡಳಿತ ಪರಿವರ್ತಿಸಿರುವುದಕ್ಕೆ ಬಿ.ಎಂ.ವಿ ವಿದ್ಯಾಸಂಸ್ಥೆಯವರು, ಎ.ಸಿ.ಐ ಸಂಸ್ಥೆಯ ನೆರವಿನೊಂದಿಗೆ ಸಂಪೂರ್ಣ ನಿರ್ವಹಣೆಯನ್ನು ಮಾಡುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ತಾಲ್ಲೂಕು ಆಡಳಿತದ ಸಹಕಾರ ಮತ್ತು ಅನುಮತಿಯೊಂದಿಗೆ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯವರು ಸೇವಾಮನೋಭಾವದಿಂದ ಸುಂಡ್ರಹಳ್ಳಿಯ ಕೋವಿಡ್ ಸೆಂಟರನ್ನು ಅತ್ಯುತ್ತಮವಾಗಿ ಹೈಟೆಕ್ ರೀತಿಯಲ್ಲಿ ಅಭಿವೃದ್ಧಿಪಡಿಸಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದರು.
ಮನೆಯಲ್ಲಿ ಆರೈಕೆ ಮಾಡುವ ಹಾಗೆ ಸಂಪೂರ್ಣ ಉಚಿತವಾಗಿ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ಮತ್ತು ಆರೈಕೆ ಮಾಡುವ ವ್ಯವಸ್ಥೆಯಿದೆ. ಸೋಂಕಿತರು ದಯಮಾಡಿ ಇಲ್ಲಿಗೆ ಬಂದು ಸೇರಿಕೊಂಡು ಚಿಕಿತ್ಸೆ ಪಡೆಯಿರಿ. ಪೌಷ್ಟಿಕ ಆಹಾರ, ಶುಚಿತ್ವದ ವಾತಾವರಣ, ವೈದ್ಯಕೀಯ ನೆರವು ಇಲ್ಲಿ ಸಿಗುತ್ತದೆ. ಸೋಂಕನ್ನು ಇತರರಿಗೆ ತಗುಲದಂತೆ ನೋಡಿಕೊಳ್ಳುತ್ತಾ ಗುಣಹೊಂದುವ ಅಗತ್ಯವಿದೆ ಎಂದು ಹೇಳಿದರು.
ಬಿ.ಎಂ.ವಿ.ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ಕೊರೊನಾ ಎರಡನೆ ಅಲೆಯು ಗ್ರಾಮೀಣ ಪ್ರದೇಶಗಳಿಗೆ ವ್ಯಾಪಕವಾಗಿ ಹಬ್ಬಿದೆ. ಸೋಂಕಿತರು ವಾಸಿಸುವ ಮನೆಗಳಲ್ಲಿ ಪ್ರತ್ಯೇಕ ವಾಸಕ್ಕೆ ಸೌಲಭ್ಯಗಳಿಲ್ಲದೆ ಇತರರೆಲ್ಲರಿಗೂ ವೇಗವಾಗಿ ಸೋಂಕು ತಗುಲುವ ಸ್ಥಿತಿ ಉಂಟಾಗಿರುವುದು ಎಲ್ಲರಲ್ಲೂ ಭೀತಿಯುಂಟುಮಾಡಿದೆ.
ಈ ಹಿನ್ನೆಲೆಯಲ್ಲಿ ಸೋಂಕಿನ ಲಕ್ಷಣಗಳಿರುವವರ ಪ್ರತ್ಯೇಕ ವಾಸ ಮತ್ತು ಚಿಕಿತ್ಸೆಗಾಗಿ ತಹಶೀಲ್ದಾರ್ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳ ಸಹಕಾರದೊಂದಿಗೆ ಜಂಗಮಕೋಟೆ ಬಳಿಯ ಸುಂಡ್ರಹಳ್ಳಿಯ ಇಂದಿರಾಗಾಂಧಿ ವಸತಿ ಕೋವಿಡ್ ಕೇರ್ ಸೆಂಟರ್ ಪ್ರಾರಭಿಸಲಾಗಿದೆ. 100 ಹಾಸಿಗೆಗಳ ಈ ಸ್ಂಟರ್ ಗೆ ಆರ್ಥಿಕ ನೆರವನ್ನು ಬೆಂಗಳೂರಿನ ಎಸಿಐ ವರ್ಲ್ಡ್ ವೈಡ್ ಕಂಪನಿಯು ನೀಡಿದ್ದು ಬಿಎಂವಿ ವಿದ್ಯಾಸಂಸ್ಥೆಯ ಸಹಭಾಗಿತ್ವದಲ್ಲಿ ಈ ಕೇಂದ್ರದ ನಿರ್ವಹಣೆ ಮಾಡಲಾಗುವುದು ಎಂದರು.
ಸುಸಜ್ಜಿತ ಗೊಳಿಸಲಾಗಿರುವ ಈ ಆರೈಕೆ ಕೇಂದ್ರದಲ್ಲಿ ಸೊಂಕಿತರಿಗೆ ಊಟ, ವಸತಿ , ಔಷದೋಪಚಾರ, ನುರಿತ ವೈದ್ಯರಿಂದ ಸಲಹೆ, ಆಪ್ತ ಸಮಾಲೋಚನೆ, ಚಿಕಿತ್ಸೆ , ಯೋಗಾಭ್ಯಾಸ ಇತ್ಯಾದಿ ಎಲ್ಲವೂ ಉಚಿತ. ಸೋಂಕಿತರು ಈ ಕೇಂದ್ರದ ಸದುಪಯೋಗ ಪಡೆದುಕೊಂಡು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಬೇಕಾಗಿ ಬಿಎಂವಿ ವಿದ್ಯಾಸಂಸ್ಥೆಯ ಹಾರೈಕೆಯಾಗಿದೆ ಎಂದರು.
ನಮ್ಮ ಸಂಸ್ಥೆ ವತಿಯಿಂದ ಕಳೆದ ವರ್ಷ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿದ್ದವರಿಗೆ ಎರಡು ಬಾರಿ ಎರಡು ತಿಂಗಳುಗಳಿಗೆ ಆಗುವಷ್ಟು ದಿನಸಿ ಕಿಟ್ ಗಳನ್ನು ನೀಡಲಾಗಿತ್ತು. ಕಳೆದ ವಾರ ಕೋವಿಡ್ ಸೋಂಕಿನ ಲಕ್ಷಣ ಇರುವ ರೋಗಿಗಳಿಗಾಗಿ ಐದು ನೂರು ಔಷದಿ ಕಿಟ್ ಗಳನ್ನು ತಹಶೀಲ್ದಾರ್ ಮತ್ತು ವೈದ್ಯಾಧಿಕಾರಿಗಳಿಗೆ ಬಿಎಂವಿ ವಿದ್ಯಾಸಂಸ್ಥೆ ಹಸ್ತಾಂತರಿಸಿದೆ.
ತಹಶೀಲ್ದಾರ್ ರಾಜೀವ್, ಜಂಗಮಕೊಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಅಂಬಿಕಾ, ಎಸಿಐ ವರ್ಲ್ಡ್ ವೈಡ್ ಕಂಪನಿಯ ಸಿರಿ ಶೆಟ್ಟಿ ಬಿಎಂವಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಎಸ್.ನಾರಾಯಣಸ್ವಾಮಿ, ಅಮೋಘ ವರ್ಷ ಮತ್ತು ಸುಂಡ್ರಹಳ್ಳಿ ಗ್ರಾಮ ಪಂಚಾಯಿತಿ ಮುಖಂಡರು ಹಾಜರಿದ್ದರು.