Sidlaghatta : ನಗರದ ಟೌನ್ ಕ್ಲಸ್ಟರ್‌ನ ಸುಮಾರು ಹತ್ತು ಶಾಲೆಗಳ ಸುಮಾರು 35 ಕ್ಕೂ ಹೆಚ್ಚು ಮಂದಿ ಬಿಸಿಯೂಟ ಅಡುಗೆ ಸಿಬ್ಬಂದಿಗೆ ಊಟ ತಯಾರಿಕಾ ಸ್ಪರ್ಧೆಯನ್ನು ಶನಿವಾರ ಕೋಟೆ ಬಾಲಕಿಯರ ಸರ್ಕಾರಿ ಶಾಲೆಯಲ್ಲಿ ನಡೆಸಿ ಉತ್ತಮ ಆಹಾರ ತಯಾರಿಸಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಆಂಜನೇಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆಯನ್ನು ನೀಗಿಸುವ ನಿಟ್ಟಿನಲ್ಲಿ ಕ್ಷೀರಭಾಗ್ಯ, ಮಧ್ಯಾಹ್ನ ಬಿಸಿಯೂಟ, ಮೊಟ್ಟೆ, ಚಿಕ್ಕಿಯಂತಹುವುಗಳನ್ನು ವಿತರಿಸಲಾಗುತ್ತಿದೆ. ಅವುಗಳ ಯಶಸ್ವಿ ಅನುಷ್ಟಾನದಲ್ಲಿ ಬಿಸಿಯೂಟ ತಯಾರಿಕಾ ಸಿಬ್ಬಂದಿ ಪ್ರಮುಖ ಪಾತ್ರ ವಹಿಸುವರು. ಸರ್ಕಾರದ ಈ ಯೋಜನೆಗಳಿಂದಾಗಿ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗಲಿದ್ದು, ದಾಖಲಾತಿ ಮತ್ತು ಹಾಜರಾತಿ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಮಾತನಾಡಿ, ಕ್ಲಸ್ಟರ್ ಹಂತದಲ್ಲಿ ಬಿಸಿಯೂಟ ತಯಾರಿಕೆ ಸಿಬ್ಬಂದಿಗಾಗಿ ಸ್ಪರ್ಧೆಗಳನ್ನು ನಡೆಸುತ್ತಿದ್ದು ತೀರ್ಪುಗಾರರು ಆಹಾರ ತಯಾರಿಕೆಯಲ್ಲಿನ ಸ್ವಚ್ಚತೆ, ಶುಚಿ-ರುಚಿ, ಆಹಾರ ತಯಾರಿಕೆಯಲ್ಲಿ ಬಳಸಲಾಗಿರುವ ಕಚ್ಚಾಪದಾರ್ಥಗಳ ಬಗ್ಗೆ ಪರಿಶೀಲಿಸಿ ಉತ್ತಮ ತಯಾರಿಕೆ ಮಾಡಿದವರಿಗೆ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಲಾಗಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಬಿಆರ್‌ಪಿ ಕೆ.ಮಂಜುನಾಥ್, ಲಕ್ಷ್ಮಿನಾರಾಯಣ್, ಚಂದ್ರಕಲಾ, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಅಡುಗೆ ಸಿಬ್ಬಂದಿ ಹಾಜರಿದ್ದರು.