ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಸಂವಿಧಾನ ದಿನಾಚರಣೆ ಹಾಗೂ ಮೂಲಭೂತ ಹಕ್ಕುಗಳ ಮತ್ತು ಮೂಲಭೂತ ಕರ್ತವ್ಯಗಳ” ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ಯಮನಪ್ಪ ಕರೆಹನುಮಂತಪ್ಪ ಮಾತನಾಡಿದರು.
ದೇಶದ ಇಡೀ ವ್ಯವಸ್ಥೆ ಸಂವಿಧಾನದಡಿ ನಡೆಯುತ್ತಿದ್ದು ಸಂವಿಧಾನದ ಆಶಯದಂತೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಕಾರ್ಯ ನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು.
ದೇಶದ ಸಂವಿಧಾನವನ್ನು ಅಂಗೀಕರಿಸಿದ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. 1949 ರ ನವೆಂಬರ್ 26 ರಂದು ಭಾರತದ ಸಂವಿಧಾನವನ್ನು ಔಪಚಾರಿಕವಾಗಿ ಅಂಗೀಕರಿಸಲಾಯಿತಾದರೂ 1950 ರ ಜನವರಿ 26 ರಿಂದ ಸಂಪೂರ್ಣ ಜಾರಿಗೆ ಬಂದಿದೆ. ಸಂವಿಧಾನದನ್ವಯ ಇರುವ ಕಾನೂನುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತರುತ್ತದೆ. ಕೆಲವೊಮ್ಮೆ ತುರ್ತು ಕಾನೂನು ರೂಪಿಸಲು ಸರ್ಕಾರಗಳಿಗೆ ಅವಕಾಶವಿದೆಯಾದರೂ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅನುಮತಿ ಪಡೆಯಬೇಕಾಗಿರುತ್ತದೆ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಎಲ್ಲಾ ಮೂಲಭೂತ ಸವಲತ್ತುಗಳು ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ರಚಿಸಲಾಗಿರುವ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಸಂವಿಧಾನದಲ್ಲಿರುವ ಹಕ್ಕುಗಳಷ್ಟೇ ಪ್ರಾಮುಖ್ಯತೆ ಕರ್ತವ್ಯಗಳಿಗೂ ಇದೆ ಹಾಗಾಗಿ ಹಕ್ಕುಗಳನ್ನು ಪಡೆಯುವ ನಿಟ್ಟಿನಲ್ಲಿ ಕರ್ತವ್ಯ ಮರೆಯಬಾರದು ಎಂದರು.
ಇದೇ ಸಂದರ್ಭದಲ್ಲಿ ಭಾರತದ ಸಂವಿಧಾನ ಪ್ರಸ್ತಾವನೆಯನ್ನು ಭೋದಿಸಲಾಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜುಕುಮಾರ್ ಎ ಪಚ್ಚಾಪುರೆ, ಹಿರಿಯ ವಕೀಲ ಸುಬ್ರಮಣ್ಯಪ್ಪ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಲಕ್ಷ್ಮಯ್ಯ, ಎನ್.ಎಸ್.ಎಸ್ ಘಟಕದ ಮುನಿರಾಜು ಹಾಜರಿದ್ದರು.