Sidlaghatta : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಬಿಟ್ಟುಕೊಡುವಂತೆ ABD ಟ್ರಸ್ಟ್ ನ ರಾಜೀವ್‌ಗೌಡ ಅವರ ಕಡೆಯವರು ನನಗೆ 30 ಕೋಟಿ ರೂಪಾಯಿಗಳ ಆಮಿಷವೊಡ್ಡಿದರು ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ವಿ.ಮುನಿಯಪ್ಪ ಗಂಭೀರ ಆರೋಪ ಮಾಡಿದ್ದಾರೆ. ವಿ.ಮುನಿಯಪ್ಪ ಅವರ ಈ ಹೇಳಿಕೆ ರಾಜಕೀಯ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿ.ಮುನಿಯಪ್ಪ ಮಾತನಾಡಿರುವ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ವಿ.ಮುನಿಯಪ್ಪ ಅವರು ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಲಿಗೆ ಸಧ್ಯಕ್ಕೆ ಅವರೇ ಹೈ ಕಮಾಂಡ್. ಆರು ಭಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಅವರು ಕ್ಷೇತ್ರದ ಮೇಲೆ ಸಾಕಷ್ಟು ಹಿಡಿತ ಸಾಧಿಸಿದ್ದಾರೆ.
ಆದರೆ ಇತ್ತೀಚೆಗೆ ಎಬಿಡಿ ಟ್ರಸ್ಟ್ ನ ಅಧ್ಯಕ್ಷ ರಾಜೀವ್‌ಗೌಡ, ಎಸ್‌ಎನ್ ಕ್ರಿಯಾ ಟ್ರಸ್ಟ್ ನ ಅಧ್ಯಕ್ಷ ಪುಟ್ಟು ಆಂಜಿನಪ್ಪ ಅವರು ಕಾಂಗ್ರೆಸ್ ಟಿಕೇಟ್ ಮೇಲೆ ಕಣ್ಣಿಟ್ಟು ತಮ್ಮದೇ ಆದ ರೀತಿಯಲ್ಲಿ ಸಮಾಜ ಸೇವೆ ಮೂಲಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳತೊಡಗಿದ್ದಾರೆ. ಈ ಮೂವರಲ್ಲಿ ಯಾರು ಬಿ.ಫಾರಂ ತರುತ್ತಾರೆ, ಯಾರನ್ನು ಬೆಂಬಲಿಸಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಈಗ ಯಕ್ಷಪ್ರಶ್ನೆಯಾಗಿ ಕಾಡತೊಡಗಿದೆ.
ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ ಅವರು ಇದ್ದಕ್ಕಿದ್ದಂತೆ ಎಬಿಡಿ ಟ್ರಸ್ಟ್ ನ ಅಧ್ಯಕ್ಷ ರಾಜೀವ್‌ಗೌಡ ಅವರ ಕಡೆಯವರು ನಮ್ಮ ಮನೆಗೆ 30 ಕೋಟಿ ರೂ ಹಣ ತಂದಿಟ್ಟಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೇಟ್ ರಾಜೀವ್‌ಗೌಡರಿಗೆ ಬಿಟ್ಟುಕೊಡಿ ಎಂದು ಹೇಳಿದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆದರೆ ನಾನು ಅವರ ಹಣವನ್ನು ವಾಪಸ್ ಎತ್ತಿಕೊಂಡು ಹೋಗುವಂತೆ ಬೈದು ಕಳುಹಿಸಿದ್ದೇನೆ. ಅದ್ಯಾರೋ ರಾಜೀವ್‌ಗೌಡ ನನಗೆ ಗೊತ್ತಿಲ್ಲ. ನಾನು 40 ವರ್ಷಗಳ ಕಾಲ ರಾಜಕೀಯವನ್ನು ಕಾಂಗ್ರೆಸ್‌ನಲ್ಲೆ ಮಾಡಿಕೊಂಡು ಬಂದಿದ್ದು ಇಂತ ವ್ಯವಹಾರಗಳೆಲ್ಲಾ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಕೊರೊನಾ ಸಮಯದಲ್ಲಿ ಸಮಾಜ ಸೇವೆಗೆಂದು ದಿಢೀರ್ ಕ್ಷೇತ್ರಕ್ಕೆ ಬಂದ ರಾಜೀವ್‌ಗೌಡ ಸಹಾಯ ಮಾಡುವ ನೆಪದಲ್ಲಿ 500 ರೂ 1000 ರೂ.ಕೊಟ್ಟಿದ್ದಾರೆ. 2000 ರೂ ಗಳ ಮೇಲೆ ಆತ ಕೊಟ್ಟ ಚೆಕ್ ಗಳು ವಾಪಸ್ಸಾಗಿವೆಯಂತೆ. ಆತನ ಮೇಲೆ ಮೂರು ಎಫ್.ಐ.ಆರ್‌ಗಳು ದಾಖಲಾಗಿವೆ. ಈ ಬಗ್ಗೆ ಕೆಪಿಸಿಸಿಗೂ ನಾನು ದೂರು ಕೊಟ್ಟಿದ್ದೇನೆಂದು ಹೇಳಿದ್ದಾರೆ.
ಅದ್ಯಾರೋ ಪುಟ್ಟು ಅಂತೆ ಅವರು ಏನೋನೋ ಮಾಡ್ತಿದ್ದಾರೆ ಎಂದು ಪುಟ್ಟು ಆಂಜಿನಪ್ಪ ಅವರ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಹಾಲಿ ಶಾಸಕ ವಿ.ಮುನಿಯಪ್ಪ ಅವರ ಹೇಳಿಕೆಯು ಕ್ಷೇತ್ರದ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಒಟ್ಟಾರೆ ಶಿಡ್ಲಘಟ್ಟದಲ್ಲಿ ಇದೀಗ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಅಂಗಳದಲ್ಲಿ ನಿಂತು ಆಕಾಶ ನೋಡುತ್ತಿದ್ದಾರೆ.