ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ, ರೈತ, ಕೂಲಿ ಕಾರ್ಮಿಕರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆಯೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಕಾಂಗ್ರೆಸ್ ಭವನದಿಂದ ಶಿಡ್ಲಘಟ್ಟ ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ನೆರೆ ಹಾವಳಿ ಮತ್ತು ಕೊರೊನ ಸಂಕಷ್ಟದಿಂದ ಜನಸಾಮಾನ್ಯರು ಪರದಾಡುತ್ತಿದ್ದಾರೆ. ಸರ್ಕಾರ ಇವರ ನೆರವಿಗೆ ಧಾವಿಸುವ ಬದಲಿಗೆ ಅವ್ಯವಹಾರಗಳ ವಿರುದ್ಧ ಧ್ವನಿ ಎತ್ತುವ ಕಾಂಗ್ರೆಸ್ ಮುಖಂಡರಿಗೆ ಲೀಗಲ್ ನೋಟೀಸ್ ನೀಡಿ ಹೆದರಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಇಂತಹ ಬೆದರಿಕೆಗೆ ಹೆದರುವುದಿಲ್ಲ. ಬದಲಿಗೆ ಜನರೊಂದಿಗೆ ಸೇರಿಕೊಂಡು ರಾಜ್ಯಾದ್ಯಂತ ಬಿಜೆಪಿ ಸರ್ಕಾರದ ಬ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯಗಳ ವಿರುದ್ದ ನಿರಂತರವಾಗಿ ಹೋರಾಟ ನಡೆಸಲಿದೆ ಎಂದರು.
ದೇಶದ ಬೆನ್ನೆಲುಬುಗಳಾದ ರೈತರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸುವ ಬದಲಿಗೆ ರೈತರ ಬೆನ್ನು ಮುರಿಯುವಂತಹ ಮಾರಕ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ರೈತ ವಿರೋಧಿ ಧೋರಣೆಯನ್ನು ಹೊಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಸರ್ಕಾರ ರೈತ ವಿರೋಧಿ, ಕಾರ್ಮಿಕ ವಿರೋಧಿ ಮತ್ತು ಜನ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆರವು ಕಲ್ಪಿಸುವುದು, ಹಾನಿಗೆ ಪರಿಹಾರ ಒದಗಿಸಲು ಹಾಗೂ ಕೊರೊನಾ ಭ್ರಷ್ಟಾಚಾರದ ಕುರಿತಾಗಿ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕೆಂದು ಒತ್ತಾಯಿಸಿ “ಜನಧ್ವನಿ” ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ಮನವಿ ಸಲ್ಲಿಸಿದರು.
ಕೆಎಂಎಫ್. ನಿರ್ದೇಶಕ ಆರ್.ಶ್ರೀನಿವಾಸ್, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ನಾಗರಾಜ್, ಬಿ.ಸುಬ್ರಮಣಿ, ರಾಜ್ಯ ಮಹಿಳಾ ಕಾರ್ಯದರ್ಶಿ ಯಾಸ್ಮೀನ್ ತಾಜ್, ಮಹಮದ್ ಹಫೀಜ್, ಇಂತಿಯಾಜ್, ರಾಮಾಂಜಿ, ಚಿದಾನಂದಮೂರ್ತಿ, ಬಳೆ ರಘು, ರಾಜ್ ಕುಮಾರ್, ಮುನಿರಾಜು ಕುಟ್ಟಿ, ಶ್ರೀನಾಥ್ ಹಾಜರಿದ್ದರು.