ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯಲ್ಲಿ ಶನಿವಾರ “ಮುಷ್ಠಿ ತುಂಬ ಅಕ್ಕಿ ಮತ್ತು ರಾಗಿ” ಯೋಜನೆಯಲ್ಲಿ ವಿದ್ಯಾರ್ಥಿಗಳು ಸಂಗ್ರಹಿಸಿದ್ದ ಐದು ಕ್ವಿಂಟಾಲ್ ರಾಗಿ ಮತ್ತು ಒಂದು ಕ್ವಿಂಟಾಲ್ ಅಕ್ಕಿಯನ್ನು ಮಹಿಳಾ ಹಕ್ಕುಗಳಿಗೆ ಹೋರಾಡುವ ವಿಮೋಚನಾ ಸಂಸ್ಥೆಯವರಿಗೆ ನೀಡುವ ಕಾರ್ಯಕ್ರಮದಲ್ಲಿ ಬಿ.ಎಂ.ವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿದರು.
ಸ್ವಂತಕ್ಕಿಂತ ಸೇವೆ ಅಮೂಲ್ಯವಾದದ್ದು ಹಾಗೂ ವಿದ್ಯಾರ್ಥಿಗಳಲ್ಲಿ ಎಳೆಯ ವಯಸ್ಸಿನಲ್ಲಿಯೇ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ “ಮುಷ್ಠಿ ತುಂಬ ರಾಗಿ” ಯೋಜನೆಯನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬದ್ಧತೆ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಕಳೆದ ಐದು ವರ್ಷಗಳ ಹಿಂದೆ ಶಾಲೆಯಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್ಬನ್ನು ಸ್ಥಾಪಿಸಲಾಯಿತು. ರೋಟರಿ ಚಟುವಟಿಕೆಗಳಲ್ಲಿ ಮಕ್ಕಳು ಸಣ್ಣ ವಯಸ್ಸಿನಿಂದಲೇ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಸಾಮರ್ಥ್ಯ ವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ರೋಟರಿ ಇಂಟರಾಕ್ಟ್ ಕ್ಲಬ್ ನ ಅಡಿಯಲ್ಲಿ ಮಕ್ಕಳು ಪಲ್ಸ್ ಪೋಲಿಯೋ, ಸ್ವಚ್ಛಗ್ರಾಮ, “ಮುಷ್ಠಿ ತುಂಬ ಅಕ್ಕಿ ಮತ್ತು ರಾಗಿ” ಯೋಜನೆ, ಕ್ಷಯ, ಕ್ಯಾನ್ಸರ್ ರೋಗಗಳ ಕುರಿತು ಅರಿವು ಮೂಡಿಸುವುದು ಮತ್ತು ವೃದ್ಧಾಶ್ರಮಗಳಿಗೆ ಬಟ್ಟೆ ಕೂಡ ನೀಡುತ್ತಿದ್ದಾರೆ ಎಂದರು.
ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಹೂ ಮತ್ತು ಸಿಹಿಯನ್ನು ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದ ಮೇಘಶ್ರೀ (92%), ಮೇಘನಾ (90%) ಅವರಿಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು. ರೊಟೇರಿಯನ್ ರಾಜೇಂದ್ರ ಮತ್ತು ನಂದಿನಿ ಅವರು ಎಂಟನೇ ತರಗತಿಯ ಇಬ್ಬರು ಬಡ ವಿದ್ಯಾರ್ಥಿಗಳ ಮೂರೂ ವರ್ಷಗಳ ಶಾಲೆಯ ಶುಲ್ಕವನ್ನು ನೀಡುವುದಾಗಿ ತಿಳಿಸಿದರು.
ಬಿ.ಎಂ.ವಿ ವಿದ್ಯಾಸಂಸ್ಥೆಯ ರೋಟರಿ ಇಂಟರಾಕ್ಟ್ ಕ್ಲಬ್ ನ 2020-21 ಅಧ್ಯಕ್ಷೆಯಾಗಿ ಒಂಬತ್ತನೇ ತರಗತಿಯ ಲೇಖನ ಮತ್ತು ಕಾರ್ಯದರ್ಶಿಯಾಗಿ ಬಿಂದು ಅವರನ್ನು ಆಯ್ಕೆ ಮಾಡಲಾಯಿತು.
ಬಿ.ಎಂ.ವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಟ್ರಸ್ಟಿಗಳಾದ ಎಸ್.ನಾರಾಯಣಸ್ವಾಮಿ, ಎಂ.ವೆಂಕಟಮೂರ್ತಿ, ಬಿ.ವೈ.ಅಶ್ವತ್ಥಪ್ಪ, ರೋಟರಿ ಬೆಂಗಳೂರು ಸೆಂಟಿನಿಯಲ್ ಅಧ್ಯಕ್ಷ ಬಿ.ಜೆ.ರಾಜೇಂದ್ರನ್, ಎನ್.ಟಿ.ಸಾಗರ್, ಎಂ.ಎಸ್.ಮಂಜುನಾಥ್, ನಂದಿನಿ ಜಗನ್ನಾಥ್, ಪದ್ಮಿನಿ ರಾಮ್, ನಂದಕುಮಾರ್, ನಂದೀಶ್ ರೆಡ್ಡಿ, ಮೋಹನ್ ಪೂಜಾರ್, ಮುಖ್ಯಶಿಕ್ಷಕ ಪಂಚಮೂರ್ತಿ ಹಾಜರಿದ್ದರು.