Sidlaghatta : ರೈತರು ಅಥವಾ ವ್ಯಾಪಾರಿಗಳು ಯಾರೇ ಆಗಿರಲಿ ತಾವು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಂಡು ನಂತರ ಸಕಾಲಕ್ಕೆ ಮರುಪಾವತಿಸುವಂತ ಮನೋಭಾವವನ್ನು ಬೆಳೆಸಿಕೊಳ್ಳಬೇಕೆ ಹೊರತು ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎಂದು ಸಾಲ ಮರುಪಾವತಿಸದೆ ಕಾಯುವಂತಾಗಬಾರದು ಎಂದು ಕೆ.ಎಂ.ಎಫ್ ಮತ್ತು ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ನಗರದ ಡಾಲ್ಫಿನ್ ಶಾಲಾ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಪಿ.ಎಲ್.ಡಿ ಬ್ಯಾಂಕ್, ಟಿ.ಎ.ಪಿ.ಸಿ.ಎಂ.ಎಸ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕರು, ಕಂಪ್ಯೂಟರ್ ಆಪರೇಟರ್‌ಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರವು ಬರಗಾಲ ಅಥವಾ ರೈತರು ಸಂಕಷ್ಟಕ್ಕೆ ಸಿಲುಕಿದಂತ ಸಂಕಷ್ಟದ ಪರಿಸ್ಥಿತಿಗಳಲ್ಲಿ ಸಾಲ ಅಥವಾ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದನ್ನೆ ಕೆಲವರು ಬಂಡವಾಳ ಮಾಡಿಕೊಂಡು ಸಾಲ ಮನ್ನಾಗೆ ಕಾಯುವಂತಾಗಿದೆ.
ಇದು ಸರ್ಕಾರಕ್ಕೂ ಒಳ್ಳೆಯದಲ್ಲ ರೈತರು ಅಥವಾ ಸಾಲ ಪಡೆದವರಿಗೂ ಒಳ್ಳೆಯದಲ್ಲ. ಇದು ನಿಮ್ಮ ಹಾಗೂ ಬ್ಯಾಂಕ್ ನ ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದು ದೇಶದಲ್ಲಿ ಸಹಕಾರ ವ್ಯವಸ್ಥೆ ಇನ್ನೂ ಜೀವಂತವಾಗಿದೆ ಎಂದರೆ ಅದು ಗ್ರಾಮೀಣ ಭಾಗದಲ್ಲಿ, ರೈತರು, ಕೃಷಿಕರ ಬದುಕಿನಲ್ಲಿ ಒಂದಷ್ಟು ಅಭಿವೃದ್ದಿಗೆ ಕಾರಣವೂ ಈ ಸಹಕಾರ ರಂಗವೇ ಕಾರಣವಾಗಿದೆ ಎಂದು ಸಹಕಾರ ಸಂಘಗಳ ಮಹತ್ವವನ್ನು ವಿವರಿಸಿದರು.
ಗ್ರಾಮಗಳಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಹಿಡಿದು ಎಲ್ಲ ಹಂತದ ಸಹಕಾರ ಸಂಸ್ಥೆ, ಸಂಘಗಳಲ್ಲಿ ಆರ್ಥಿಕ ಶಿಸ್ತು ಮುಖ್ಯ, ಬಹುತೇಕ ಸಂಘಗಳಲ್ಲಿ ಆರ್ಥಿಕ ಶಿಸ್ತು ಇಲ್ಲದೆ ಇಂದು ಅನೇಕ ಸಂಘ ಸಂಸ್ಥೆಗಳು ಆರ್ಥಿಕವಾಗಿ ನಷ್ಟಕ್ಕೆ ಗುರಿಯಾಗಿವೆ ಎಂದರು.
ಸಾಲ ನೀಡುವ ಸಹಕಾರ ಸಂಸ್ಥೆಗಳಾಗಲಿ ಸಾಲ ಪಡೆದುಕೊಳ್ಳುವ ರೈತರು, ವ್ಯಕ್ತಿಗಳಾಗಲಿ ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳದಿದ್ದರೆ ಆರ್ಥಿಕ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಭೀಮೇಶ್ ಮಾತನಾಡಿ, ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯು ಪ್ರಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಕಾಲ ಕಾಲಕ್ಕೆ ಸರ್ಕಾರವು ನೀಡುವ ನಿರ್ದೇಶನಗಳನ್ನು ಪಾಲಿಸುತ್ತಾ ಅದನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟು ಉತ್ತಮವಾಗಿ ಸಹಕಾರ ಸಂಘಗಳು ಕಾರ್ಯನಿರ್ವಹಿಸುವಂತಾಗಬೇಕು. ಆ ಮೂಲಕ ಸಹಕಾರ ಸಂಘಗಳು ಹಾಗೂ ರೈತರ ಅಭಿವೃದ್ದಿ ಆಗಬೇಕಿದೆ ಎಂದು ಮನವಿ ಮಾಡಿದರು.
ಪಿ.ಎಲ್.ಡಿ ಬ್ಯಾಂಕ್, ಟಿ.ಎ.ಪಿ.ಸಿ.ಎಂ.ಎಸ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿಯ ಸದಸ್ಯರು, ಮುಖ್ಯ ಕಾರ್ಯನಿರ್ವಾಹಕರು, ಕಂಪ್ಯೂಟರ್ ಆಪರೇಟರ್‌ಗಳು ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ನಾಗರಾಜ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎನ್.ಕೆ.ಲಕ್ಷ್ಮೀಪತಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಡಿ.ಸಿ.ರಾಮಚಂದ್ರ, ಕೋಚಿಮುಲ್ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ರವಿಕಿರಣ್, ಡಿಸಿಸಿ ಬ್ಯಾಂಕ್‌ನ ಶಿಡ್ಲಘಟ್ಟ ಶಾಖಾ ವ್ಯವಸ್ಥಾಪಕ ಆನಂದ್, ಜಿಲ್ಲಾ ಸಹಕಾರ ಒಕ್ಕೂಟದ ವ್ಯವಸ್ಥಾಪಕ ಬಿ.ವಿ.ಪ್ರದೀಪ್ ಹಾಜರಿದ್ದರು.