ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಮತ್ತು ಭಕ್ತರಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಹಾಗೂ ನಗರಸಭೆಗೆ ಭೇಟಿ ನೀಡಿ ಆಡಳಿತ ಸುಧಾರಣೆಯ ಬಗ್ಗೆ ಸಲಹೆ ಸೂಚನೆಗಳನ್ನು ಪಡೆದು ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಟಿ.ಎಂ. ವಿಜಯಭಾಸ್ಕರ್ ಮಾತನಾಡಿದರು.
ತಾಲ್ಲೂಕಿನ ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಆರು ಲಕ್ಷ ರೂಗಳಿದ್ದರೆ, ಆ ಗ್ರಾಮ ಪಂಚಾಯತಿಯ ವಿದ್ಯುತ್ ಬಿಲ್ ಬಾಕಿ ಐದು ಕೋಟಿ ರೂಗಳಷ್ಟಿರುವುದು ಬಗ್ಗೆ ಗಮನಕ್ಕೆ ಬಂದಿದೆ. ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಆದಾಯಕ್ಕಿಂತಲೂ ಹೆಚ್ಚಿನ ವೆಚ್ಚಗಳು ಆಗಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದರು.
ನಗರಸಭೆಯು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಲ್ಲಿ ಪೌರ ಕಾರ್ಮಿಕರ ಸಂಬಳದ ವಿಳಂಬ ಮತ್ತು ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದಿದ್ದೇವೆ. ಜಿಲ್ಲೆಯ ಎಲ್ಲಾ ನಗರಸಭೆಯ ಹಾಗೂ ಪುರಸಭಾ ಅಧಿಕಾರಿಗಳು ಆಗಮಿಸಿದ್ದು ಅವರ ಸಮಸ್ಯೆಯನ್ನು ಆಲಿಸಿ ಸೂಕ್ತವಾದ ಸಲಹೆ ಮತ್ತು ಪರಿಹಾರವನ್ನು ಸೂಚಿಸಿದ್ದಾಗಿ ಹೇಳಿದರು.
ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ಶೀಘ್ರವಾಗಿ, ಯಾವುದೇ ವಿಳಂಬ ಅಥವಾ ತೊಂದರೆಯಿಲ್ಲದೆ ಸುಗಮವಾಗಿ ಸಿಗಬೇಕು. ಸಾರ್ವಜನಿಕ ಕುಂದುಕೊರತೆಗಳು ತ್ವರಿತವಾಗಿ ವಿಲೇವಾರಿ ಆಗಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದರು.
ಉಪವಿಭಾಗಾಧಿಕಾರಿ ರಘುನಂದನ್, ತಹಶೀಲ್ದಾರ್ ಬಿ.ಎಸ್. ರಾಜೀವ್, ಯೋಜನಾ ನಿರ್ದೇಶಕಿ ರೇಣುಕಾ, ನಗರಸಭೆಯ ಪೌರಾಯುಕ್ತ ಶ್ರೀಕಾಂತ್, ಅಧ್ಯಕ್ಷೆ ಸುಮಿತ್ರಾ ರಮೇಶ್, ಉಪಾಧ್ಯಕ್ಷ ಅಫ್ಸರ್ ಪಾಷ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಸಿಬ್ಬಂದಿ ಹಾಜರಿದ್ದರು.