Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಶನಿವಾರ ಸ್ವಚ್ಛ ಹಾಗೂ ಹಸಿರು ಚಿಕ್ಕಬಳ್ಳಾಪುರ ಮತ್ತು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸುವ ಸಂಬಂಧ ಏರ್ಪಡಿಸಲಾಗಿದ್ದ ಸ್ವಚ್ಛತಾ ಅಭಿಯಾನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳು ಹಾಗೂ ಬಿ.ಪಿ.ಎಲ್.ಎಫ್ ಅಧ್ಯಕ್ಷರುಗಳ ಸಮ್ಮುಖದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರು ಮಾತನಾಡಿದರು.
ಸ್ವಚ್ಛತೆಗೆ ನಾವು ಮೊದಲ ಆದ್ಯತೆ ನೀಡಬೇಕು. ಸ್ವಚ್ಛತೆಯನ್ನು ಮನೆಗಳಿಗೆ ಸೀಮಿತಗೊಳಿಸದೇ ಮನಸ್ಸಿನೊಳಗೆ ಆ ಭಾವನೆಯನ್ನು ನೀರೆರೆದು ಬೆಳೆಸಬೇಕು. ಆಗ ನಮ್ಮ ಬೀದಿ ಹಾಗೂ ಊರನ್ನು ಸ್ವಚ್ಛವಾಗಿರಿಸಿಕೊಳ್ಳುತ್ತೇವೆ. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುತ್ತೇವೆ. ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡುತ್ತೇವೆ. ಆಗ ನಮ್ಮ ಸಮಾಜ ಆರೋಗ್ಯಪೂರ್ಣವಾಗಿರುತ್ತದೆ. ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ಮೂಲಕ ನಮ್ಮ ಕ್ಷೇತ್ರದ ಜನ ಮಾದರಿಯಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಸುಧಾರಣೆ ತರಲು ನಿರ್ಣಯಗಳನ್ನು ಕೈಗೊಳ್ಳುವಾಗ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕಾನೂನಾತ್ಮಕವಾಗಿ ಕೆಲಸ ಮಾಡಬೇಕು. ತಪ್ಪು ಮಾಡದೇ ಜನರ ಅನುಕೂಲಕ್ಕಾಗಿ ಕೆಲಸ ಮಾಡುವ ಸಂಕಲ್ಪ ಮಾಡಬೇಕು. ಗ್ರಾಮ ಪಂಚಾಯಿತಿಗಳಿಗೆ ಅಧಿಕಾರವನ್ನು ನೀಡಿರುವುದು ಜನರಿಗೆ ಅನುಕೂಲ ಕಲ್ಪಿಸಲೆಂದು. ಹಾಗಾಗಿ ಜನರ ಕೆಲಸಗಳನ್ನು ಸಮಯಕ್ಕೆ ಸರಿ ಯಾಗಿ ಮಾಡಿಕೊಡಿ. ಗ್ರಾಮ ಪಂಚಾಯಿತಿಯನ್ನು ಮಾದರಿಯಾಗಿರುವಂತೆ ರೂಪಿಸುವ ಶಕ್ತಿ ಮತ್ತು ಅವಕಾಶ ನಿಮಗಿದೆ ಎಂದರು.
ತ್ಯಾಜ್ಯವನ್ನು ವರ್ಗೀಕರಿಸಿ ವಿಲೇವಾರಿ ಮಾಡುವುದು ಮತ್ತು ಕಂದಾಯಗಳನ್ನು ಸಮರ್ಪಕವಾಗಿ ವಸೂಲಿ ಮಾಡುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಬಳಸಲು ಸಂಪನ್ಮೂಲವನ್ನು ಕ್ರೂಡೀಕರಿಸಿಕೊಳ್ಳಿ. ಹಳ್ಳಿಗರ ಸಹಭಾಗಿತ್ವದೊಡನೆ ಜಲಜೀವನ್ ಮಿಷನ್ ಯೋಜನೆಯನ್ನು ಕಾರ್ಯಗತಗೊಳಿಸಿ ಎಂದು ನುಡಿದರು.
ಜಿ.ಪಂ.ಉಪಕಾರ್ಯದರ್ಶಿ ಭಾಸ್ಕರ್, ತಾಲ್ಲೂಕು ಪಂಚಾಯಿತಿ ಇಒ ಜಿ.ಮುನಿರಾಜ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲುಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಹಸಿರುದಳ ಸಹಾಯಕ ವ್ಯವಸ್ಥಾಪಕ ಮೋಹನ್ ಕುಮಾರ್, ಸಿಡಿಪಿಒ ನವತಾಜ್, ತಾದೂರು ರಘು ಹಾಜರಿದ್ದರು.