Sidlaghatta : ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶೇಖರಣೆಯಾಗಿರುವ ಕಸವನ್ನು ವಿಲೇವಾರಿ ಮಾಡುವ ಕ್ರಮಗಳ ಬಗ್ಗೆ ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಗಳಾದ ಬೋಡಾ ಮತ್ತು ಫಿಶ್ ತಂಡದ ಸದಸ್ಯರು ತಿಳಿಸಿಕೊಟ್ಟಿದ್ದಾರೆ ಎಂದು ನಗರಸಭೆ (City Municipal council) ಪೌರಾಯುಕ್ತ ಶ್ರೀಕಾಂತ್ ತಿಳಿಸಿದರು.
ಶಿಡ್ಲಘಟ್ಟ ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ತ್ಯಾಜ್ಯ ವಿಲೇವಾರಿಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವಿದೆ. ಅಲ್ಲಿ 2010 ರಿಂದ ಕಸ ಶೇಖರಣೆಯಾಗಿದೆ. ಅದನ್ನು ವಿಲೇವಾರಿ ಮಾಡದಿರುವುದರಿಂದಾಗಿ ಹಲವು ಸಮಸ್ಯೆಗಳು ತಲೆದೋರಿವೆ. ಈಗ ಈ ತ್ಯಾಜ್ಯವನ್ನೆಲ್ಲಾ ವಿಲೇವಾರಿ ಮಾಡಲೆಂದು ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಗಳಾದ ಬೋಡಾ ಮತ್ತು ಫಿಶ್ ಗಳ ನೆರವನ್ನು ಪಡೆದುಕೊಳ್ಳುತ್ತಿದ್ದೇವೆ. ಇವರಿಂದ ತ್ಯಾಜ್ಯ ಘಟಕದ ಸಮೀಕ್ಷೆ ನಡೆಸಲಾಗಿದೆ. ಅಲ್ಲಿ ಎಷ್ಟು ಪ್ರಮಾಣದಲ್ಲಿ ಕಸ ಇದೆ. ಅದನ್ನು ಹೇಗೆ ವಿಂಗಡಿಸಿ ವಿಲೇವಾರಿ ಮಾಡಬೇಕೆಂದು ಅವರು ಯೋಜನೆ ಸಿದ್ಧಪಡಿಸಿದ್ದಾರೆ. ಈ ಪ್ರಕ್ರಿಯೆಯನ್ನು ಹೇಗೆ ನಡೆಸುವರು ಹಾಗೂ ವೆಚ್ಚದ ಬಗ್ಗೆ ಅವರು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಸ್ವಯಂ ಸೇವಾ ಸಂಸ್ಥೆಗಳಾದ ಬೋಡಾ ಮತ್ತು ಫಿಶ್ ಸಂಸ್ಥೆಯ ಜೀವನ್ ಮತ್ತು ತಂಡದವರು ಹಾಜರಿದ್ದು ಪ್ರಾತ್ಯಕ್ಷಿಕೆ ಹಾಗೂ ವಿವರಣೆ ನೀಡಿದರು. ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.