Chikkadasenahalli, Sidlaghatta : ಭಗವಂತನಿಗೆ ಕೈ ಮುಗಿಯಬೇಕು, ಪೂಜೆ ಸಲ್ಲಿಸಿ ನೈವೇಧ್ಯವನ್ನು ಅರ್ಪಿಸಬೇಕು. ಅದಕ್ಕೂ ಮುಖ್ಯವಾಗಿ ಮನೆಯಲ್ಲಿ ತಂದೆ ತಾಯಿಗೆ ಗೌರವ ನೀಡಿ ಅವರನ್ನು ಆರೈಕೆ ಮಾಡಿದರೆ ಮಾತ್ರವೇ ಭಗವಂತನಿಗೆ ಸಲ್ಲಿಸಿದ ಪೂಜೆಯ ಫಲ ನಮಗೆ ಸಿಗುತ್ತದೆ ಇಲ್ಲವಾದಲ್ಲಿ ಇಲ್ಲ ಎಂದು ಶ್ರೀಕ್ಷೇತ್ರ ಗೊಲ್ಲಗಿರಿ ಮಹಾ ಸಂಸ್ಥಾನದ ಶ್ರೀಕೃಷ್ಣ ಯಾದವಾನಂದ ಮಹಾಸ್ವಾಮಿ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಜೀರ್ಣೊದ್ಧಾರ, ವಿಮಾನಗೋಪುರ ಕುಂಭಾಭಿಷೇಕ, ಮಹಾ ಗಣಪತಿ, ನವಗ್ರಹಗಳು, ನಾಗರ ವಿಗ್ರಹಗಳ ಶಿಲಾಬಿಂಬ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ನಮಗೆ ಜನ್ಮ ನೀಡಿದ ತಂದೆ ತಾಯಿಗೆ ಮೂರೊತ್ತು ಊಟ ಹಾಕಿ ಬಟ್ಟೆ ಕೊಟ್ಟು ಅವರನ್ನು ಆರೈಕೆ ಮಾಡದೇ ಇದ್ದರೆ ಯಾವ ದೇವಾಲಯಕ್ಕೆ ಹೋದರೂ ಪೂಜೆ ಮಾಡಿ ನೈವೇಧ್ಯ ಅರ್ಪಿಸಿದರೂ ಏನೂ ಉಪಯೋಗವಾಗದು ಎಂದು ಹೇಳಿದರು.
ಹೆತ್ತವರಿಗಿಂತಲೂ ಮಿಗಿಲಾದ ದೇವರಿಲ್ಲ. ಆಡಂಬರದ ಬದುಕು ಬೇಡ. ಎಲ್ಲರೊಂದಿಗೆ ಬೆರೆತು ಸೌಹಾರ್ಧತೆಯ ಬದುಕನ್ನು ನಡೆಸಿದರೆ ಮಾತ್ರ ನಮ್ಮೆಲ್ಲರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಈ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಗ್ರಾಮದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಾಲಯವನ್ನು ಕಟ್ಟಿದ್ದು ದಿನವೂ ಪೂಜೆ ಪುನಸ್ಕಾರಗಳನ್ನು ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರ ಈ ಸಾಮರಸ್ಯ ಇತರರಿಗೂ ಮಾದರಿಯಾಗಲಿ. ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳ ಒತ್ತಡದ ನಡುವೆ ಧಾರ್ಮಿಕ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುವುದರಿಂದ ಒತ್ತಡ ಕಡಿಮೆ ಆಗಲಿದೆ, ಮಾನಸಿಕ ನೆಮ್ಮದಿ ಸಿಗಲಿದೆ ಎಂದು ಹೇಳಿದರು.
ಭಗವಂತನ ಆಶೀರ್ವಾದದಿಂದ ಕಾಲ ಕಾಲಕ್ಕೆ ಮಳೆ ಆಗಲಿ ಬೆಳೆ ಆಗಲಿ ಎಲ್ಲೆಲ್ಲೂ ಹಸಿರು ತುಂಬಿ ಎಲ್ಲರ ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿ ನೆಲಸಲಿ ಎಂದು ಆಶಿಸಿದರು.
ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಮಂಗಳವಾಧ್ಯಘೋಷದೊಂದಿಗೆ ಗೋಮಾತೆ ಪೂಜೆ ನೆರವೇರಿಸಿ ಗಂಗಾ ಪೂಜೆ ನೆರವೇರಿಸಲಾಯಿತು. ನಾನಾ ಪೂಜೆ ಪುನಸ್ಕಾರ ಹೋಮ ಹವನಗಳನ್ನು ನೆರವೇರಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ವಿಧಾನಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ಎಂ.ನಾಗರಾಜ್ ಯಾದವ್, ಮಾಜಿ ಶಾಸಕಿ ಪೂರ್ಣಿಮಾ, ಮಾಜಿ ಎಂ.ಪಿ ಎಸ್.ಮುನಿಸ್ವಾಮಿ, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಮುಖಂಡ ಸೀಕಲ್ ಆನಂದಗೌಡ, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ದೇವಾಲಯ ಅಭಿವೃದ್ದಿ ಸಮಿತಿ ಸದಸ್ಯರು, ಭಕ್ತರು, ಗ್ರಾಮಸ್ಥರು ಭಾಗವಹಿಸಿದ್ದರು.