Sidlaghatta : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷವು ನನಗೆ ಅವಕಾಶ ಕೊಟ್ಟರೆ ಖಂಡಿತಾ ಸ್ಫರ್ಧಿಸುತ್ತೇನೆ. ನಾನೂ ಕೂಡ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಆಕಾಂಕ್ಷಿ ಆಗಿದ್ದೇನೆ ಎಂದು ಶಿಡ್ಲಘಟ್ಟದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದ ಬಿಜೆಪಿಯ ಸೇವಾ ಸೌಧ ಕಚೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಸಮಾವೇಶ ಮತ್ತು ಸಾಮಾಜಿಕ ಸಮ್ಮೇಳನಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಸಂಸತ್ ಕ್ಷೇತ್ರದಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರೂ ಹರಿದಾಡುತ್ತಿದೆ. ನಾನೂ ಕೂಡ ಆಕಾಂಕ್ಷಿ ಆಗಿದ್ದೇನೆ ಎಂದರು.
ಶಿಡ್ಲಘಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗಣನೀಯ ಸಂಖ್ಯೆಯಲ್ಲಿ ಮತಗಳನ್ನು ಪಡೆದಿದ್ದೇನೆ. ಚಿಕ್ಕಬಳ್ಳಾಪುರ ಸಂಸತ್ ಕ್ಷೇತ್ರ ವ್ಯಾಪ್ತಿಯ ಪರಿಚಯ ನನಗಿದೆ. ಹಾಗಾಗಿ ಪಕ್ಷವು ಅವಕಾಶ ಮಾಡಿಕೊಟ್ಟರೆ ನಾನೂ ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು.
ಪಕ್ಷದ ಮುಖಂಡರ ಸೂಚನೆಗಾಗಿ ಕಾಯುತ್ತಿದ್ದೇನೆ, ಒಂದು ವೇಳೆ ಬೇರೆ ಯಾರಿಗೆ ಕೊಟ್ಟರೂ ಅವರ ಪರ ಕೆಲಸವನ್ನೂ ಮಾಡುತ್ತೇನೆ. ಒಟ್ಟಾರೆ ಮೋದಿ ಅವರಿಗೆ ಬಲ ನೀಡಿ ಮತ್ತೊಮ್ಮೆ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕೆಂಬುದು ನಮ್ಮೆಲ್ಲರ ಗುರಿ ಎಂದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ಏರ್ಪಡುತ್ತಾ ಇಲ್ಲವೇ ಬಿಜೆಪಿ ಅಭ್ಯರ್ಥಿ ಮಾತ್ರವೇ ಸ್ಪರ್ಧಿಸುತ್ತಾರಾ ಎನ್ನುವುದು ಇನ್ನೆರಡು ದಿನಗಳಲ್ಲಿ ತೀರ್ಮಾನವಾಗುತ್ತದೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ದರು ಎಂದರು.
ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಮಾಜಿ ಶಾಸಕ ಎಂ.ರಾಜಣ್ಣ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಂಜನೇಯಗೌಡ ಹಾಜರಿದ್ದರು.