ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಗೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ವಿ.ಮುನಿಯಪ್ಪ ಉದ್ಘಾಟಿಸಿದರು.
ಚಾಗೆ ಗ್ರಾಮದ ವಿಶಾಲವಾದ ನಿವೇಶನದಲ್ಲಿ ಸುಮಾರು 13 ಲಕ್ಷ 80 ಸಾವಿರ ರೂ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ರೈತರು ಗುಣಮಟ್ಟದ ಹಾಲು ಉತ್ಪಾದಿಸಿ ಸಹಕಾರ ಸಂಘದ ಮೂಲಕ ವಹಿವಾಟು ಮಾಡಿದಲ್ಲಿ ಸಂಘ ಹಾಗೂ ಹಾಲು ಉತ್ಪಾದಕರಿಬ್ಬರೂ ಉತ್ತಮ ಲಾಭಾಂಶ ಪಡೆಯಬಹುದು. ಪ್ರತಿಯೊಬ್ಬರೂ ಮನೆಗೊಂದು ಹಸುವನ್ನು ಸಾಕುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದು ಸೇರಿದಂತೆ ಸಂಘದಿಂದ ಸಿಗುವ ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆದುಕೊಳ್ಳಿ ಎಂದರು.
ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ಮಾತನಾಡಿ, ಗ್ರಾಮದ 36 ಕುಟುಂಬಗಳಿಂದ ಸುಮಾರು 380 ಲೀ ಹಾಲು ಮಾತ್ರ ಸಂಘಕ್ಕೆ ಪೂರೈಕೆಯಾಗುತ್ತಿದ್ದು ಇನ್ನೂ ಹೆಚ್ಚಿನ ಹಾಲು ಉತ್ಪಾದನೆಗೆ ಈ ಭಾಗದ ರೈತರು ಮುಂದಾಗಬೇಕು ಎಂದರು. ಪ್ರತಿಯೊಬ್ಬ ರೈತರು ತಮ್ಮ ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ ಇನ್ನು ಒಕ್ಕೂಟದಿಂದ ಸಿಗಲಿರುವ ವೈದ್ಯಕೀಯ ಸವಲತ್ತು ಸೇರಿದಂತೆ ವಿವಿಧ ಪರಿಕರಗಳನ್ನು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ದಿ ಹೊಂದಬೇಕು ಎಂದರು.
ಈ ಸಂದರ್ಭದಲ್ಲಿ ಶಿಬಿರ ಘಟಕದ ಉಪ ವ್ಯವಸ್ಥಾಪಕ ಡಾ.ಬಿ.ವಿ.ಚಂದ್ರಶೇಖರ್, ಚಾಗೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಕೆ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಆರ್ ಮುರಳೀಧರನ್, ಗ್ರಾಮ ಪಂಚಾಯತಿ ಅಧ್ಯಕ್ಷೆ ನಿರ್ಮಲಾ ಬೈರೇಗೌಡ, ಸದಸ್ಯ ಹರೀಶ್, ಮುಖಂಡರಾದ ದ್ಯಾವಪ್ಪ, ಮುನಿಯಪ್ಪ, ಆಂಜಿನಪ್ಪ, ವೆಂಕಟರಾಯಪ್ಪ ಹಾಜರಿದ್ದರು.