ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೆಗೌಡನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯನುಭವ ಚಟುವಟಿಕೆ ಅಡಿಯಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಬರಡು ರಾಸುಗಳ ತಪಾಸಣಾ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ವಿಜ್ಞಾನಿ ಪಿ.ಎಚ್. ರಾಮಾಂಜಿನಿ ಗೌಡ ಮಾತನಾಡಿದರು.
ಸಾಕು ಪ್ರಾಣಿಗಳಲ್ಲಿ ಮಾತ್ರವಲ್ಲದೇ ವನ್ಯ ಮೃಗಗಳಲ್ಲೂ ಕಂಡುಬರುವ ರೋಗ ‘ಗಳಲೆ ರೋಗ’ (ಗಂಟಲು ಬೇನೆ- ಪಾಸ್ಚುರೆಲ್ಲಾ ಮಲ್ಟೋಸಿಡಾ). ಈ ರೋಗ ಬಂದಾಗ ಅಸಡ್ಡೆ ತೋರಿದರೆ ಅದು ಜಾನುವಾರುಗಳ ಪ್ರಾಣಕ್ಕೂ ಕುತ್ತಾಗಬಹುದು. ಆದರೆ ಎಷ್ಟೋ ಬಾರಿ ಈ ಸಮಸ್ಯೆ ಆರಂಭ ಆಗಿರುವುದು ರೈತರಿಗೆ ತಿಳಿಯುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಆಗ್ಗಾಗ್ಗೆ ಕಂಡುಬರುತ್ತಿರುವ ಈ ರೋಗದ ಕುರಿತಾಗಿ ಮಾಹಿತಿ ತಿಳಿದಿರಬೇಕು ಎಂದು ಅವರು ತಿಳಿಸಿದರು.
ಈ ರೋಗ ಹರಡಿಸುವ ರೋಗಾಣು ಆಹಾರ ಮತ್ತು ನೀರಿನ ಮುಖಾಂತರ ಪ್ರಾಣಿಗಳ ದೇಹವನ್ನು ಪ್ರವೇಶಿಸುತ್ತದೆ. ಈ ರೋಗಾಣು ಪ್ರಾಣಿಯ ದೇಹದಲ್ಲಿ ಪ್ರವೇಶ ಮಾಡಿದ ನಂತರ, ವಾತಾವರಣದ ವೈಪರೀತ್ಯದಿಂದ ಇದು ದೇಹವನ್ನು ಆಕ್ರಮಿಸಿಕೊಂಡು ಪ್ರಾಣಿಗಳ ಪ್ರಾಣಕ್ಕೆ ಕುತ್ತು ತರುತ್ತವೆ. ಇದೊಂದು ರೀತಿಯಲ್ಲಿ ಸಾಂಕ್ರಾಮಿಕ ರೋಗವಾಗಿದ್ದು ರೋಗಕ್ಕೆ ತುತ್ತಾದ ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಹರಡುತ್ತದೆ. ಈ ರೋಗ ಬಂದಾಗ ಪ್ರಾಣಿಗಳಲ್ಲಿ ಅತಿಯಾದ ಜ್ವರ ಕಾಣಿಸಿಕೊಳ್ಳುತ್ತದೆ. ಪ್ರಾಣಿಗಳು ಏಕಾಏಕಿಯಾಗಿ ಜೊಲ್ಲು ಸುರಿಸಲು ಆರಂಭಿಸುವುದು. ಗಂಟಲ ಕೆಳಗೆ ಊತವುಂಟಾಗಿ ತೀವ್ರವಾದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮೇವು ಮತ್ತು ನೀರು ತೆಗೆದುಕೊಳ್ಳುವುದನ್ನು ನಿಲ್ಲಿಸಿ ನಿಶ್ಶಕ್ತಿಯಿಂದ ಬಳಲುತ್ತವೆ. ರೋಗದ ತೀವ್ರತೆ ಜಾಸ್ತಿಯಾದಾಗ ಪ್ರಾಣಿಗಳು ಬೇಗನೆ ಸಾವನ್ನಪ್ಪುತ್ತವೆ ಎಂದು ಅವರು ವಿವರಿಸಿದರು.
ರೋಗವನ್ನು ತಡೆಗಟ್ಟಲು ಸರಳ ಮತ್ತು ಉಪಯುಕ್ತ ವಿಧಾನವೆಂದರೆ ಲಸಿಕೆ ಹಾಕಿಸುವುದು. ವರ್ಷಕ್ಕೆ ಒಂದು ಬಾರಿ ಈ ಲಸಿಕೆಯನ್ನು ಕೊಡಿಸಬೇಕು. ಮಳೆಗಾಲ ಪ್ರಾರಂಭವಾಗುವ ಮೊದಲು ಕಡ್ಡಾಯವಾಗಿ ಲಸಿಕೆ ಕೊಡಿಸಬೇಕು. ಎಮ್ಮೆ ಮತ್ತು ದನ, ಕರುಗಳಲ್ಲಿ ಹಾಗೂ ಕುರಿ ಮತ್ತು ಮೇಕೆಗಳಲ್ಲಿ ಮೂರು ತಿಂಗಳ ವಯಸ್ಸಿನ ನಂತರ ಲಸಿಕೆಯನ್ನು ಹಾಕಿಸಬೇಕು. ಈ ಲಸಿಕೆಯ ಇಲಾಖೆಯ ಪಶುವೈದ್ಯ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ. ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಪ್ರತಿ ವರ್ಷ ಮೇ ತಿಂಗಳಲ್ಲಿ ‘ಆಸ್ಕಾಡ್’ ಯೋಜನೆಯಡಿ ಲಸಿಕೆ ಹಾಕಲಾಗುವುದು ಎಂದರು.
ಪಶುವೈದ್ಯಾಧಿಕಾರಿ ಡಾ.ಬಿ.ಕೆ. ರಮೇಶ್ ಮಾತನಾಡಿ, ಮೂಕ ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಹಸು, ಮೇಕೆ, ಕುರಿ, ಕೋಳಿ ಇವುಗಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ಹಾಕಿಸಿ ಮತ್ತು ಜೀವ ವಿಮೆ ಮಾಡಿಸಬೇಕು. ದನದ ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಸುಗಳಿಗೆ ಒಳ್ಳೆಯ ಆಹಾರ, ಇಂಡಿ, ಬೂಸಾ, ಹಸಿ ಮೇವು ಮತ್ತು ಒಣ ಮೇವನ್ನು ಸಮಯಕ್ಕೆ ಸರಿಯಾಗಿ ಕೊಡಬೇಕು ಎಂದು ಹೇಳಿದರು.
ಸುಮಾರು ಒಂದು ನೂರು ಹಸುಗಳನ್ನು ತಪಾಸಣೆ ಮಾಡಲಾಯಿತು. ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ವಿತರಿಸಲಾಯಿತು. ಅಪ್ಪೆಗೌಡನಹಳ್ಳಿ, ಗಂಗನಹಳ್ಳಿ, ಕಂಬದಹಳ್ಳಿ ಹಾಗೂ ಸುತ್ತ ಮುತ್ತಲಿನ ರೈತರು ತಮ್ಮ ಹಸುಗಳನ್ನು ತಪಾಸಣೆ ಮಾಡಿಸಲು ಕರೆ ತಂದಿದ್ದರು.
ಕೃಷಿ ವಿಸ್ತರಣಾ ಅಧಿಕಾರಿ ಡಾ.ವೈ.ಎನ್.ಶಿವಲಿಂಗಯ್ಯ, ಟಿ.ಎಂ.ಅರವಿಂದ, ದಯಾನಂದ, ಶ್ರೀರಾಮ, ಡಾ.ತಿಮ್ಮರಾಜು, ಡಾ.ಶ್ರೀನಿವಾಸ, ಡಾ. ಕೃಷ್ಣಮೂರ್ತಿ, ಡಾ. ಸುಚಿತ್ರಾ, ಡಾ.ಪೂಜಾರ ಸೂರಪ್ಪ, ಡಾ.ಆನಂದ್ ಮಾನೆಗಾರ್, ಡಾ.ಗಣೇಶಮೂರ್ತಿ, ಅಪ್ಪಾಜಿಗೌಡ, ಮುನಿರೆಡ್ಡಿ, ಎಂಪಿಸಿಎಸ್ ಮಧು, ಮುನೀಂದ್ರ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta