ಈಗಿನ ಸ್ಪರ್ಧಾಯುಗದಲ್ಲಿ ಯಾವುದೆ ವಸ್ತುವನ್ನಾಗಲಿ ಗುಣಮಟ್ಟ ಇಲ್ಲದೆ ಮಾರಾಟ ಮಾಡಲು ಕಷ್ಟಸಾಧ್ಯ. ಇದಕ್ಕೆ ಹಾಲು ಹಾಗೂ ಹಾಲು ಉತ್ಪನ್ನಗಳು ಕೂಡ ಹೊರತಾಗಿಲ್ಲ ಎಂದು ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ಶಿಡ್ಲಘಟ್ಟ ನಗರದ ಕೋಚಿಮುಲ್ ಶಿಬಿರ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈನುಗಾರರಿಗೆ ವಿಮೆಯ ಹಣದ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು.
ಹಾಲಿನ ಗುಣಮಟ್ಟ ಇನ್ನಷ್ಟು ಹೆಚ್ಚಬೇಕಿದೆ. ಗುಣಮಟ್ಟ ಇಲ್ಲದಿದ್ದರೆ ನಾವು ಮಾರುಕಟ್ಟೆಯಲ್ಲಿನ ಸ್ಪರ್ಧೆಯಲ್ಲಿ ಮುನ್ನುಗ್ಗಲು ಸಾಧ್ಯವಿಲ್ಲ. ಹಾಗಾಗಿ ಹೈನುಗಾರರು ಗುಣಮಟ್ಟದ ಹಾಲನ್ನು ಉತ್ಪಾದಿಸಲು ಮುಂದಾಗಬೇಕಿದೆ ಎಂದರು.
ಹಳೆಯ ಪದ್ದತಿಗಳಿಗೆ ಸೀಮಿತವಾಗದೆ ನೂತನ ಪದ್ದತಿಯಲ್ಲಿ ಹೈನುಗಾರಿಕೆಯನ್ನು ಮಾಡಿ ಗುಣಮಟ್ಟದ ಹಾಲನ್ನು ಉತ್ಪಾದಿಸಿ ಪೂರೈಸಿದಾಗಲೆಉಳಿದು ಬೆಳೆಯಲು ಸಾಧ್ಯ ಎಂದು ಹೇಳಿದರು.
ಇನ್ನು ಸಾಕಷ್ಟು ಮಂದಿಗೆ ರಾಸುಗಳ ವಿಮೆ ಕುರಿತು ಸರಿಯಾದ ಮಾಹಿತಿಯಿಲ್ಲ. ಎಷ್ಟೋ ಮಂದಿ ನಾವು ವಿಮೆ ಹಣ ಕಟ್ಟುತ್ತಿದ್ದೇವೆ ಹಣವೇ ಬರಲಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ವಿಮೆ ಹಣ ಕಟ್ಟುವುದರಿಂದ ರಾಸು ಮೃತಪಟ್ಟಾಗ ರಾಸುವಿನ ಬೆಲೆಯ ಪೂರ್ತಿ ಮೊತ್ತ ರೈತನಿಗೆ ಸೇರುತ್ತದೆ. ಈ ನಿಟ್ಟಿನಲ್ಲಿ ವಿಮೆ ಬಹಳ ಸಹಕಾರಿ ಎಂದರು.
ಈ ಸಂದರ್ಭದಲ್ಲಿ ವಿಮೆ ಮಾಡಿಸಿದ ಸೀಮೆ ಹಸುಗಳು ಮೃತಪಟ್ಟಿದ್ದು ಅವುಗಳ ಮಾಲೀಕರಿಗೆ ವಿಮೆಯ ಚೆಕ್‌ಗಳನ್ನು ವಿತರಿಸಲಾಯಿತು.
ಕೋಚಿಮುಲ್ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಡಾ.ಶಂಕರ್‌ರೆಡ್ಡಿ, ವೈ.ಹುಣಸೇನಹಳ್ಳಿ ಎಸ್‌ಎಫ್‌ಸಿಎಸ್ ಬ್ಯಾಂಕ್ ಅಧ್ಯಕ್ಷ ಬಸವರಾಜು, ವಿಸ್ತರಣಾಕಾರಿ ಶ್ರೀನಿವಾಸ್, ಜಯಚಂದ್ರ, ಶಂಕರ್‌ಕುಮಾರ್, ಕುಮ್ಮಣ್ಣ ಹಾಜರಿದ್ದರು.