Taladummanahalli, Sidlaghatta : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್.ಸಿ.ಡಿ ಘಟಕ ಹಾಗೂ ಮಹತಿ ಟ್ರಸ್ಟ್ ಸಹಯೋಗದಲ್ಲಿ ಉಚಿತ ಅಸಾಂಕ್ರಾಮಿಕ ರೋಗಗಳು ಹಾಗೂ ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣಾ ಶಿಬಿರವನ್ನು ತಲದುಮ್ಮನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯೆ ಡಾ.ಸುಂದರಿ, ಇಂದು ಮಹಿಳೆಯರನ್ನು ಕಾಡುವ ಹಲವಾರು ಕಾಯಿಲೆಗಳಲ್ಲಿ ಸರ್ವೈಕಲ್ ಕ್ಯಾನ್ಸರ್ ಅಂದರೆ ಗರ್ಭಕಂಠದ ಕ್ಯಾನ್ಸರ್ ಕೂಡ ಒಂದು. ಜಾಗತಿಕವಾಗಿ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ನಾಲ್ಕನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಆಗಿದೆ. ಪ್ರತಿ ವರ್ಷ ಪತ್ತೆಯಾಗುವ ಒಟ್ಟು ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳ ಪೈಕಿ ಕಾಲುಭಾಗದಷ್ಟು ಪ್ರಕರಣಗಳ ಭಾರತದಲ್ಲೇ ಪತ್ತೆಯಾಗುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ತೆರಳಿ ಈ ಬಗ್ಗೆ ಮಹಿಳೆಯರಿಗೆ ತಿಳಿವಳಿಕೆ ಮೂಡಿಸಿ, ಪರೀಕ್ಷೆ ಮಾಡುತ್ತಿದ್ದೇವೆ. ಅಕಸ್ಮಾತ್ ಕ್ಯಾನ್ಸರ್ ಇರುವುದು ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜಕಿ ಕವಿತಾ, ಸಾಯಿಬಾಬಾ ಆಸ್ಪತ್ರೆಯ ಮಂಜುನಾಥ್, ಸುಬ್ರಮಣಿ, ವಿಜಯಕುಮಾರ್, ದೇವರಮಳ್ಳೂರು ಗ್ರಾಮ ಪಂಚಾಯಿತಿ ಸದಸ್ಯೆ ಪವಿತ್ರ ದೇವರಾಜ್, ಗ್ರಾಮಸ್ಥರು ಹಾಜರಿದ್ದರು.