Sidlaghatta : ರಾಷ್ಟ್ರೀಯ ಹೆದ್ದಾರಿ 234 ಚತುಷ್ಪಥ ರಸ್ತೆ ನಗರದ ಮಯೂರ ವೃತ್ತದಲ್ಲಿ ಹಾದು ಹೋಗುವುದನ್ನು ತಪ್ಪಿಸಿ ಗೌಡನಕೆರೆ ಕಟ್ಟೆಯಿಂದ ನಗರಸಭೆಯ ಉದ್ಯಾನದವರೆಗೆ ಬೈಪಾಸ್ ರಸ್ತೆಯನ್ನು ನಿರ್ಮಿಸಬೇಕೆಂದು ಮಯೂರ ವೃತ್ತ ಹಾಗೂ ಸಮೀಪದ ವಿವಿಧ ಅಂಗಡಿ ಮಾಲೀಕರು, ಮನೆಗಳವರು ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾಗಿ ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು ಗಡಿಯವರೆಗೆ ಚತುಷ್ಪಥ ರಸ್ತೆ ಮಾಡಲು ಅಳತೆ ಮತ್ತು ಸರ್ವೆ ಕಾರ್ಯ ಮುಗಿದಿದೆ. ಶಿಡ್ಲಘಟ್ಟ ನಗರದಲ್ಲಿ ಬೈಪಾಸ್ ರಸ್ತೆಗೆ ಜಾಗ ಗುರುತಿಸಿದರೆ ಚಿಕ್ಕಬಳ್ಳಾಪುರದಿಂದ ಮುಳಬಾಗಿಲು ಗಡಿಯವರೆಗೆ ಒಂದೇ ಬಾರಿ ಡಿ.ಪಿ.ಆರ್ ಗಾಗಿ ಟೆಂಡರ್ ಕರೆಯಲು ಅನುಕೂಲವಾಗಿರುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಿಳಿಸಿದ್ದಾರೆ.
ಆದ್ದರಿಂದ ಗೌಡನಕೆರೆ ಕಟ್ಟೆಯಿಂದ ನಗರಸಭೆಯ ಉದ್ಯಾನದವರೆಗೆ ಬೈಪಾಸ್ ರಸ್ತೆಯನ್ನು ನಿರ್ಮಾಣ ಮಾಡುವುದರಿಂದ ಮಯೂರ ವೃತ್ತ ಹಾಗೂ ಅದರ ಬಳಿಯಿರುವ ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಹಿತರಕ್ಷಣೆಯಾಗುತ್ತದೆ. ಬೈಪಾಸ್ ರಸ್ತೆ ನಿರ್ಮಾಣದಿಂದ ನಗರದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಮನವಿ ಸಲ್ಲಿಸಿದರು.
ಎಚ್.ಜಿ.ಗೋಪಾಲಗೌಡ, ವೇಣುಗೋಪಾಲ್, ರಾಘವೇಂದ್ರ, ಬಿ.ನಾರಾಯಣಸ್ವಾಮಿ, ಗೋಪಾಲ್ ಹಾಜರಿದ್ದರು.