Sidlaghatta : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಪ್ರತಿಯೊಬ್ಬರನ್ನೂ ಅಧ್ಯಾತ್ಮದ ಚೈತನ್ಯದತ್ತ ಕರೆತರುತ್ತ ಶಿವ ಸಂಸ್ಕೃತಿಯ ಪ್ರತೀಕದಂತೆ ಪ್ರಜ್ವಲಿಸುತ್ತಿದೆ ಎಂದು ಬ್ರಹ್ಮಕುಮಾರಿ ಸಮಾಜದ ಸಂಚಾಲಕಿ ಬಿ.ಕೆ. ರಾಮಲಕ್ಶ್ಮಮ್ಮ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ರಾತ್ರಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ 88 ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ ಹಾಗೂ ಮಹಾ ಶಿವರಾತ್ರಿಯ ಪ್ರಯುಕ್ತ ಆಯೋಜಿಸಿದ್ದ ಅಮರನಾಥ ಶಿವಲಿಂಗ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ಸನಾತನ ಧರ್ಮವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಉಳಿಸಿ ಬೆಳೆಸುವಂತ ಕೆಲಸ ಮಾಡುತ್ತಾ 180 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಎಲ್ಲ ಧರ್ಮಗಳೂ ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತವೆ. ಅಂತಹ ಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಬೇಕು. ಇಂಥಹ ಆಂತರಿಕ ಶಕ್ತಿಯು ಧ್ಯಾನದಿಂದ ಬರುತ್ತದೆ. ವ್ಯಾಯಾಮದಿಂದ ದೈಹಿಕ ಹಾಗೂ ವ್ಯವಹಾರದಿಂದ ಆರ್ಥಿಕ ಶಕ್ತಿ ಸಂಪಾದಿಸಿದರೆ, ಅಧ್ಯಯನದಿಂದ ಅಧ್ಯಾತ್ಮ ಶಕ್ತಿ ಪಡೆಯಬಹುದು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶಿವನ ಜ್ಞಾನ, ಯೋಗ, ಏಕಾಗ್ರತೆ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಅಮರನಾಥ ಶಿವಲಿಂಗ ದರ್ಶನದ ಮೆರವಣಿಗೆ ಮಾಡಲಾಯಿತು. ಅಮರನಾಥ ಲಿಂಗದ ಮಹತ್ವದ ಬಗ್ಗೆ ಪ್ರವಚನ ನಡೆಯಿತು.
ಬ್ರಹ್ಮಕುಮಾರಿ ಸಮಾಜದ ಪುಷ್ಪ, ದೇವಿಕಾ, ವಿ.ಎ.ಮಂಜುನಾಥ್, ಲಕ್ಷ್ಮಿ, ಎಂ.ಎ.ರಾಮಕೃಷ್ಣ, ಹರೀಶ್, ನಾರಾಯಣಸ್ವಾಮಿ, ನಗರಸಭಾ ಸದಸ್ಯ ಮುನಿರಾಜು ಹಾಜರಿದ್ದರು.