“ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ” ಗ್ರಾಮ ವಾಸ್ತವ್ಯ ಕಾರ್ಯಕ್ರಮದಡಿ ಜನರ ಬಳಿಗೆ ಅಧಿಕಾರಿಗಳು ಬಂದು ವಿವಿಧ ಸವಲತ್ತುಗಳನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ, ಈ ಕಾರ್ಯಕ್ರಮದಿಂದ ಗ್ರಾಮದ ಹಲವರಿಗೆ ವಿವಿಧ ಸವಲತ್ತುಗಳು ನೀಡಲಾಗುತ್ತಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗ್ರಾಮೀಣರಿಗೆ ವಿವಿದ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರದ ಸವಲತ್ತುಗಳು ಜನರಿಗೆ ತಲುಪಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಗ್ರಾಮದ ಹಿರಿಯ ನಾಗರಿಕರಿಗೆ ಸಂದ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಆದೇಶ ಪತ್ರ ವಿತರಣೆ ಸೇರಿದಂತೆ 94 ಸಿ ಹಕ್ಕುಪತ್ರ ವಿತರಣೆ, ವಿಶೇಷ ಚೇತನರಿಗೆ ಪಿಂಚಣಿ ಆದೇಶ ಪತ್ರ, ಹಲವರಿಗೆ ಸಲಕರಣೆ ಸೇರಿದಂತೆ ೩೫ ಫೌತಿ ವರಸೆ ಖಾತೆ, 15 ಜನರಿಗೆ ಪಡಿತರ ಚೀಟಿ ಸೇರಿದಂತೆ ಹಲವರಿಗೆ ಭಾಗ್ಯ ಲಕ್ಷ್ಮಿ ಬಾಂಡ್ ವಿತರಿಸಲಾಯಿತು.
“ಯು ಡಿಸರ್ವ್ ದ ಸಸ್ಪೆಂಶನ್. ಯಾವೂರು ನಿಂದು. ಮನೆಗೆ ಕಳಿಸಿಬಿಡುತ್ತೇನೆ. ನನ್ನವರೆಗೂ ಈ ಚಿಕ್ಕ ಸಮಸ್ಯೆ ಬರಬೇಕೇನ್ರಿ. ಇವರನ್ನು ನೋಡಿದರೆ ಗೊತ್ತಾಗಲ್ವ ಪಿಂಚಣಿ ಮಾಡಿಕೊಡಬೇಕು ಅಂತ” ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಗ್ರಾಮ ಲೆಕ್ಕಿಗ ನಾಗರಾಜ್ ಅವರನ್ನು ಗದರಿದರು.
ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವರಿಗೆ ಗ್ರಾಮದ ಮಂಜುನಾಥ ಎಂಬುವವರು ತಮ್ಮ ಪರಿಸ್ಥಿತಿಯನ್ನು ವಿವರಿಸಿ ಪಿಂಚಣಿ ಮಾಡಿಕೊಡದಿರುವ ಅಧಿಕಾರಿಗಳ ಬಗ್ಗೆ ದೂರಿದಾಗ ಅವರು ಗ್ರಾಮ ಲೆಕ್ಕಿಗರಿಗೆ ಇವತ್ತೇ ಅವರಿಗೆ ಪಿಂಚಣಿ ಪ್ರಮಾಣಪತ್ರ ವಿತರಿಸುವಂತೆ ತಾಕೀತು ಮಾಡಿದರು.
“ನೋಡಯ್ಯ ಈ ರೀತಿಯ ಜನರಿಗೆ ತೊಂದರೆ ಕೊಡಬಾರದು. ಇಂಥ ವಿಷಯಗಳು ನಮ್ಮ ವರೆಗೂ ಬರಬಾರದು. ಇವರಿಗೆ ಕೆಲಸ ಆಗದಿದ್ದರೆ ನೀನು ಖಂಡಿತ ಮನೆಗೆ ಹೋಗುತ್ತೀಯ. ಟ್ರಾನ್ಸ್ ಫರ್ ಅಲ್ಲ, ಸೀದಾ ಮನೆಗೆ ಅಷ್ಟೇ. ನೀವು ಏನು ಕೆಲಸ ಮಾಡುತ್ತಿದ್ದೀರ. ಸರ್ಕಾರದಿಂದ ಕೊಡುವ ಹಣ ಅವರಿಗೆ ಸಿಗುವುದು ಬೇಡವಾ. ಅವರನ್ನು ನೋಡಿದರೆ ನಿಮಗೇನೂ ಅನ್ನಿಸಲ್ವಾ. ಮನೆಮನೆಗೆ ಹೋದಾಗ ಇವರು ಹೇಗೆ ನಿಮ್ಮ ಕಣ್ಣಿಗೆ ಬೀಳಲಿಲ್ಲ. ಸಂಜೆ ಹೊತ್ತಿಗೆ ಸ್ಯಾಂಕ್ಷನ್ ಆರ್ಡರ್ ಕೊಡಬೇಕು” ಎಂದು ತರಾಟೆಗೆ ತೆಗೆದುಕೊಂಡರು.
ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಮನೆಯೊಂದಕ್ಕೆ ಭೇಟಿ ನೀಡಿದಾಗ ಅವರು ಮನೆಯ ಬಳಿ ಇರುವ ಟ್ರಾನ್ಸ್ ಫಾರ್ಮರ್ ನಿಂದ ತೊಂದರೆಯಾಗಿದೆ ದೂರ ಹಾಕಿಸಿ ಎಂದು ವಿನಂತಿಸಿದರು
ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮಹಿಳೆಯೊಬ್ಬರು ತಮ್ಮ ಮನೆಗೆ ಹೋಗಲು ದಾರಿ ಇಲ್ಲವೆಂದು ದೂರು ಸಲ್ಲಿಸಿದರು
ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಗುಡಿಸಲು ಮನೆಯವರು ನಿವೇಶನ ಕೋರಿದರು
ಗ್ರಾಮದ ಸರ್ಕಾರಿ ಶಾಲಾ ಮಕ್ಕಳು ಶಾಲೆಗೆ ಹೆಚ್ಚುವರಿ ಕೊಠಡಿ ಮಂಜೂರು ಮಾಡುವಂತೆ ಮಾನವಿ ಮಾಡಿದರು. ಗ್ರಾಮದ ಅಂಗನವಾಡಿ ಕಟ್ಟಡ ಚಿಕ್ಕದಾಗಿದ್ದು ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿಸಿಕೊಡುವ ಭರವಸೆಯನ್ನು ಜಿಲ್ಲಾಧಿಕಾರಿ ಆರ್.ಲತಾ ನೀಡಿದರು.