ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ಶಾಲೆಯ ಆವರಣದಲ್ಲಿ ಶನಿವಾರ ಎ.ಸಿ.ಐ ವರ್ಲ್ಡ್ ವೈಡ್ ನೆರವಿನೊಂದಿಗೆ ಬಿ.ಎಂ.ವಿ ವಿದ್ಯಾಸಂಸ್ಥೆಯವರು ಕೋವಿಡ್ ಸೋಂಕಿತರಿಗೆ ವಿತರಿಸಬೇಕಿರುವ ಔಷಧಿ ಕಿಟ್ ಗಳನ್ನು ತಹಶೀಲ್ದಾರ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ನೀಡಿ ಬಿ.ಎಂ.ವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಹೋಂ ಐಸೊಲೇಶನ್ ನಲ್ಲಿರುವ ಕೊರೊನಾ ಸೋಂಕಿತರಿಗೆ ಅನುಕೂಲವಾಗಲೆಂದು ವೈದ್ಯರ ಸಲಹೆ ಪಡೆದು ಐದು ನೂರು ಔಷಧಿ ಕಿಟ್ ಗಳನ್ನು ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ನಮ್ಮ ಶಾಲೆಯಲ್ಲಿಯೇ ಕೋವಿಡ್ ಕೇರ್ ಸೆಂಟನ್ನು ತೆರೆಯಲು ಉದ್ದೇಶಿಸಿದ್ದು ತಾಲ್ಲೂಕು ಆಡಳಿತಕ್ಕೆ ಈ ಬಗ್ಗೆ ಅನುಮತಿಗಾಗಿ ಕೋರಿದೆವು. ಕೆಲವೊಂದು ನ್ಯೂನತೆಗಳಿರುವುದರಿಂದ ಜಂಗಮಕೋಟೆಯಲ್ಲಿ ಚೌಲ್ಟ್ರಿಯನ್ನು ಪರಿಶೀಲಿಸಿದ್ದು, ಅದಕ್ಕೆ ಸಕಲ ಸವಲತ್ತ್ಗಳುಳ್ಳ ಹೈಟೆಕ್ ಸ್ಪರ್ಶವನ್ನು ಕೊಟ್ಟು ಗ್ರಾಮೀಣ ಕೋವಿಡ್ ಸೋಂಕಿತರಿಗೆ ಉತ್ತಮ ಚಿಕ್ತ್ಸೆ ಕೊಡಿಸಲು ಸಿದ್ಧತೆ ನಡೆಸಿದ್ದೇವೆ. ತಾಲ್ಲೂಕು ಆರೋಗ್ಯಾಧಿಕಾರಿಯವರು ಸರ್ಕಾರಿ ವೈದ್ಯರನ್ನು ನಿಯೋಜಿಸಲು ಒಪ್ಪಿರುತ್ತಾರೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ದಾನಿಗಳು ಮುಂದೆ ಬಂದು ಈ ರೀತಿ ನೆರವು ನೀಡುವುದರಿಂದ ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ಸಹಾಯಕವಾಗುತ್ತದೆ. ಮಾನವೀಯತೆಯೇ ಬಹಳ ಮುಖ್ಯ. ಅದರಿಂದಲೇ ನಾವು ಕೊರೊನಾ ವಿರುದ್ಧ ಗೆಲುವನ್ನು ಸಾಧಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ರಾಜೀವ್, ಬಿ.ಎಂ.ವಿ ಸಂಸ್ಥೆಯ ಚಿದಾನಂದ, ಅಮೋಘವರ್ಷ, ಸಿರಿಶೆಟ್ಟಿ, ಡಾ.ವಸಿಷ್ಠ, ಎ.ಎನ್.ದೇವರಾಜು, ಪ್ರತಿಮಾದೇವಿ, ಸರೋಜಮ್ಮ ಹಾಜರಿದ್ದರು.