Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾಸಂಸ್ಥೆಯ (Bhaktarahalli BMV Education Trust) ಶ್ರೀ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಗುರುವಾರ ಕಾಮ್ ವಾಲ್ಟ್ ಮತ್ತು ಸ್ಮೈಲ್ ಫೌಂಡೇಶನ್ ವತಿಯಿಂದ 60 ಟ್ಯಾಬ್ ಗಳ ವಿತರಣಾ ಕಾರ್ಯಕ್ರಮದಲ್ಲಿ (Tablet PC Distribution) ಬಿ.ಎಂ.ವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಅವರು ಮಾತನಾಡಿದರು.
ದಾನಿಗಳ ಸಹಕಾರದಿಂದ ನಮ್ಮ ಶಾಲೆಯ ಮಕ್ಕಳಿಗೆ ಟ್ಯಾಬ್ ಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳು ಈಗಿನ ತಾಂತ್ರಿಕತೆಯನ್ನು ಬಳಕೆ ಮಾಡಿಕೊಳ್ಳಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ದೃಷ್ಟಿಯಿಂದ ತಂತ್ರಜ್ಞಾನದ ಬಳಕೆಗೆ ಹೆಚ್ಚಿನ ಆದ್ಯತೆ ನೀಡುವ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.
ಐದೈದು ಮಕ್ಕಳ ಗುಂಪುಗಳನ್ನು ಮಾಡಿ, ಆ ಒಂದೊಂದು ಗುಂಪಿಗೆ ಒಂದೊಂದು ಟ್ಯಾಬ್ ನೀಡಲಾಗುತ್ತಿದೆ. ಈ ಟ್ಯಾಬ್ ನಲ್ಲಿ ಒಂದರಿಂದ ಹತ್ತನೆಯ ತರಗತಿಯವರೆಗಿನ ಪಠ್ಯವನ್ನೆಲ್ಲಾ ಇರಿಸಲಾಗಿದೆ. ಮಕ್ಕಳು ಸುಲಭವಾಗಿ ಅದರಿಂದ ಕಲಿಯಬಹುದಾಗಿದೆ. ಒಟ್ಟಾರೆ 300 ವಿದ್ಯಾರ್ಥಿಗಳು 60 ಟ್ಯಾಬ್ ಗಳಿಂದ ಅನುಕೂಲ ಪಡೆಯುವರು ಎಂದರು.
ಕಾಮ್ ವಾಲ್ಟ್ ಕಂಪನಿಯ ಪ್ರದೀಪ್ ಮಾತನಾಡಿ, ಟ್ಯಾಬ್‍ಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ವೃದ್ಧಿ ಮಾಡಿಕೊಂಡು ಕಲಿಕೆಯಲ್ಲಿ ಮುಂದೆ ಬರಬೇಕು. ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದುಕೊಳ್ಳುವ ಮೂಲಕ ಶಾಲೆಗೆ ಕೀರ್ತಿ ತರಬೇಕು ಎಂದರು.
ಬಿ.ಎಂ.ವಿ ಸಂಸ್ಥೆಯ ಟ್ರಸ್ಟಿ ಸಂತೆ ನಾರಾಯಣಸ್ವಾಮಿ ಮಾತನಾಡಿ, 21ನೇ ಶತಮಾನವು ಜ್ಞಾನದ ಶತಮಾನವಾಗಿದೆ. ವಿದ್ಯಾರ್ಥಿಗಳು ಟ್ಯಾಬ್‍ನಲ್ಲಿ ಅಳವಡಿಸಿರುವ ಪಠ್ಯಗಳನ್ನು ಶ್ರದ್ಧೆಯಿಂದ ಕಲಿತು ಪರೀಕ್ಷೆಗಳಲ್ಲಿ ಉತ್ತಮ ಅಂಕವನ್ನು ಪಡೆಯಬೇಕು. ದಾನಿಗಳ ಸಹಕಾರಕ್ಕೆ ಚಿರಋಣಿಗಳಾಗಿದ್ದು ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಇದು ಸಹಕಾರಿಯಾಗಲಿದೆ ಎಂದರು.
ಸ್ಮೈಲ್ ಫೌಂಡೇಶನ್ ನ ಬೆನೀಟಾ ಮ್ಯಾಥ್ಯೂಸ್, ಅರ್ಚನ, ಸ್ವಪ್ನ ರವೀಂದ್ರನ್, ಕಾಮ್ ವಾಲ್ಟ್ ಕಂಪನಿಯ ಪ್ರದೀಪ್, ದಿನೇಶ್ ಬಾಬು, ಶರತ್, ಬಿ.ಎಂ.ವಿ ಸಂಸ್ಥೆಯ ಟ್ರಸ್ಟಿ ಸಂತೆ ನಾರಾಯಣಸ್ವಾಮಿ, ಮುಖ್ಯ ಶಿಕ್ಷಕರಾದ ವೆಂಕಟಮೂರ್ತಿ, ಪಂಚಮೂರ್ತಿ, ಶಿಕ್ಷಕರಾದ ಮಂಜುನಾಥ್, ಪ್ರಕಾಶ್, ಮಧುಚಂದ್ರ, ಪ್ರತೀಮಾದೇವಿ, ಸುನಿತಾ, ಸರೋಜಮ್ಮ, ಮಂಜುಳಾ, ಆರ್.ಮಂಜುಳ, ರೇಣುಕಾ, ವೆಂಕಟೇಶ್, ಬಸವರಾಜ್, ಪ್ರತಿಭಾ ಹಾಜರಿದ್ದರು.