Yannangur, Sidlaghatta : ದೇಶಸೇವೆ ಮಾಡುತ್ತಾ ಹುತಾತ್ಮರಾದ ಯಣ್ಣಂಗೂರಿನ ಗಂಗಾಧರ್ ಅವರ ನೆನಪು ನಮ್ಮೆಲ್ಲರ ಮನದಲ್ಲಿ ಹಸಿರಾಗಿರುತ್ತದೆ. ಅವರ ನೆನಪಿನಲ್ಲಿ ಅವರ ಕುಟುಂಬದವರು ಪ್ರತಿವರ್ಷ ರಕ್ತದಾನ ಶಿಬಿರ ಮತ್ತು ಸಸಿ ವಿತರಣೆ ಮಾಡುತ್ತಿರುವುದು ಅನುಕರಣೀಯ ಸಂಗತಿಯಾಗಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ ಭಾನುವಾರ ಹುತಾತ್ಮ ಯೋಧ ಯಣ್ಣಂಗೂರಿನ ಗಂಗಾಧರ್ ಅವರ ಆರನೇ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶಸೇವೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟವರು ಆದರ್ಶಪ್ರಾಯರು. ಜನಸಾಮಾನ್ಯರ ನೆಮ್ಮದಿಗಾಗಿ ಅವರು ಕುಟುಂಬದಿಂದ ದೂರವಿದ್ದು, ಪ್ರಾಣದ ಹಂಗು ತೊರೆದು ದೇಶದ ರಕ್ಷಣೆ ಮಾಡುತ್ತಾರೆ. ಈಗಿನ ಯುವಕರು ಇವರಿಂದ ಪ್ರೇರಣೆ ಹೊಂದಬೇಕು ಎಂದು ಹೇಳಿದರು.
ಈ ಅಂದರ್ಭದಲ್ಲಿ ರಕ್ತದಾನಿಗಳಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಗೆಲ್ಲ ಸಸಿಗಳನ್ನು ನೀಡಲಾಯಿತು. ರಕ್ತದಾನ ಮಾಡಿದವರಿಗೆ ರೆಡ್ ಕ್ರಾಸ್ ಸಂಸ್ಥೆಯ ಪ್ರಮಾಣ ಪತ್ರವನ್ನು ನೀಡಲಾಯಿತು.
ಹುತಾತ್ಮ ಗಂಗಾಧರ್ ಅವರ ತಮ್ಮ ಯೋಧ ರವಿಕುಮಾರ್, ತಂದೆ ಮುನಿಯಪ್ಪ, ತಾಯಿ ಲಕ್ಷ್ಮಮ್ಮ, ಪತ್ನಿ ಡಾ.ಶಿಲ್ಪಾ ಮತ್ತು ಮಗ ಪವನ್ ಹಾಗೂ ಗ್ರಾಮಸ್ಥರು ಹಾಜರಿದ್ದರು.