Sidlaghatta : ಸ್ವಚ್ಛತೆ ಎಂಬುದು ಜೀವನದಲ್ಲಿ ಬಹು ಮುಖ್ಯ. ನಮ್ಮ ಮನೆ ಹಾಗೂ ಸುತ್ತಲಿನ ಪರಿಸರವನ್ನು ಎಷ್ಟು ಸಾಧ್ಯವೋ ಅಷ್ಟು ಸ್ವಚ್ಛವಾಗಿರಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಸ್ವಚ್ಛ ಪರಿಸರವು ಆರೋಗ್ಯ, ಸಕಾರಾತ್ಮಕ ಚಿಂತನೆ, ಪ್ರವಾಸೋದ್ಯಮ, ಅಭಿವೃದ್ಧಿ ಎಲ್ಲವನ್ನೂ ಒಂದರ ಹಿಂದೊಂದು ತರುತ್ತದೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದ ಚಿಂತಾಮಣಿ ರಸ್ತೆಯಲ್ಲಿರುವ ಚಂದ್ರಶೇಖರ ದೇವಸ್ಥಾನದ ಸುತ್ತಲಿನ ಪರಿಸರವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ಸ್ವಚ್ಛಗೊಳಿಸುವ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲೆಂದರಲ್ಲಿ ಕಸ ಬಿಸಾಡುವುದು, ತ್ಯಾಜ್ಯವನ್ನು ಎಸೆಯುವುದು, ಉಗುಳುವುದು ಈ ರೀತಿಯ ದುರಭ್ಯಾಸಗಳನ್ನು ಬಿಡಬೇಕು. ನಮ್ಮ ಮನೆಯಂತೆಯೇ ನಮ್ಮ ಗಲ್ಲಿ, ಬೀದಿ, ಹಳ್ಳಿ, ಊರು ಮತ್ತು ನಾಡನ್ನು ಚಂದವಾಗಿ ಇರಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಅಭ್ಯಾಸಗಳನ್ನು ರೂಢಿಸಿಕೊಳ್ಳೋಣ. ಶಾಲಾ ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ಪಠ್ಯದಲ್ಲಿ ಹೇಳದಿರುವ ಈ ಉತ್ತಮಗುಣಗಳನ್ನು ಕಲಿಸೋಣ. ನಮ್ಮ ಊರು, ದೇವಸ್ಥಾನ, ಉದ್ಯಾನವನ, ಪರಿಸರ ಚೆನ್ನಾಗಿದ್ದರೆ, ದೇಶ ವಿದೇಶಗಳಿಂದ ಪ್ರವಾಸಿಗರು ಬರುವಂತಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ವಚ್ಛತೆಯು ಅಭಿವೃದ್ಧಿಗೆ ಏಣಿಯಿದ್ದಂತೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರಮೋದಿ ಅವರು ನೀಡಿರುವ ಕರೆಯಂತೆ “ಒಂದು ದಿನ ಒಂದು ಗಂಟೆ” ಅಭಿಯಾನದ ಅಂಗವಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರು ಚಂದ್ರಶೇಖರ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಇದು ಮುಂದುವರೆದು ಮುಂದಿನ ದಿನಗಳಲ್ಲಿ ಹಳ್ಳಿ ಮತ್ತು ಹೋಬಳಿ ಮಟ್ಟದಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ನಡೆಸಲಿದ್ದೇವೆ.
ಸ್ವಚ್ಛತೆ ಕಾಪಾಡಬೇಕು ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆಶಯವಾಗಿದ್ದು, ಈ ಆಶಯಕ್ಕೆ ಪೂರಕವಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ ಎಂದರು.
ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಶಿಡ್ಲಘಟ್ಟದಲ್ಲಿ ಚಂದ್ರಶೇಖರ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿದ್ದೇವೆ. ಇಷ್ಟಕ್ಕೆ ಸುಮ್ಮನಾಗದೆ ಈ ದೇವಾಲಯವನ್ನು ನಮ್ಮ ಪಕ್ಷದ ಮುಖಂಡ ಸೀಕಲ್ ರಾಮಚಂದ್ರಗೌಡ ನೇತೃತ್ವದಲ್ಲಿ ಜೀರ್ಣೋದ್ಧಾರಗೊಳಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಹೇಳಿದರು.
ನಮ್ಮ ವೈಯುಕ್ತಿಕ ಹಾಗೂ ಸಾಮೂಹಿಕ ಪರಿಸರ ಸ್ವಚ್ಚತೆ ಕುರಿತು ಶಾಲಾ ಕಾಲೇಜು ದಿನಗಳಿಂದಲೆ ಅರಿವು ಮೂಡಿಸುವ ಮತ್ತು ತೊಡಗಿಸಿಕೊಳ್ಳುವ ಕೆಲಸ ಆಗಬೇಕಿದೆ. ಆಗ ನಮ್ಮ ಪರಿಸರವು ಉತ್ತಮವಾಗಲಿದ್ದು ನಮ್ಮೆಲ್ಲರ ಬದುಕು, ಆರೋಗ್ಯ ಉತ್ತಮವಾಗಲಿದೆ ಎಂದು ಆಶಿಸಿದರು.
ಬಿಜೆಪಿ ಮುಖಂಡ ಸೀಕಲ್ ಆನಂದ್‌ಗೌಡ, ಸುರೇಂದ್ರಗೌಡ, ಕನಕಪ್ರಸಾದ್, ಬಿ.ಸಿ.ನಂದೀಶ್, ನಾರಾಯಣಸ್ವಾಮಿ ಹಾಜರಿದ್ದರು.