Sidlaghatta : ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಯಾರೇ ಇರಬಹುದು, ನಿರೀಕ್ಷೆ ಮೀರಿ ಫಲಿತಾಂಶ ಬಂದಿದೆ. ಇದು ರಾಜ್ಯದ ಮತಬಾಂಧವರ ತೀರ್ಮಾನ. ಅವರ ಹಕ್ಕು. ಯಾರಿಗೆ ಬೆಂಬಲ ಕೊಡಬೇಕು ಅನ್ನೋದು ಅವರ ಸ್ವ-ಇಚ್ಛೆಗೆ ಬಿಟ್ಟಿದ್ದು. ಇದನ್ನು ಎಲ್ಲರೂ ಸ್ವಾಗತಿಸಬೇಕು. ಆ ನಿಟ್ಟಿನಲ್ಲಿ ನಾವು ಕೂಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಬಿಜೆಪಿ ಇಂದ ಮತದಾರರ ತೀರ್ಮಾನವನ್ನು ಸ್ವಾಗತಿಸಿದ್ದೇವೆ ಎಂದು ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರ ಗೌಡ ತಿಳಿಸಿದರು
ನಗರದ ಮಯೂರ ವೃತ್ತದಲ್ಲಿರುವ ಬಿಜೆಪಿ ಸೇವಾ ಸೌಧದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶದ ಕುರಿತಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ತುಂಬಾ ಕಡಿಮೆ ಅವಧಿಯಲ್ಲಿ ಬಿಜೆಪಿ ಪಕ್ಷವನ್ನು ಶಿಡ್ಲಘಟ್ಟ ಕ್ಷೇತ್ರದಲ್ಲಿ ಸಂಘಟಿಸಿಎವು. ಮಾರ್ಚ್ 9ನೇ ತಾರೀಕು ನಾನು ಪಕ್ಷಕ್ಕೆ ಸೇರ್ಪಡೆಯಾದೆ. ಕೇವಲ 60 ದಿನದಲ್ಲಿ ಬಿಜೆಪಿ ಪಕ್ಷ ಇಲ್ಲವೇ ಇಲ್ಲ ಎನ್ನುತ್ತಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಾವು ಪಕ್ಷದ ಪ್ರಚಾರ ಕಾರ್ಯ ನಡೆಸಿದೆವು, ಸುಮಾರು 15 ರಿಂದ 16 ಸಾವಿರ ಮತಗಳನ್ನು ಜನರು ಕೊಟ್ಟಿದ್ದಾರೆ. ನಾವು ಕೇವಲ 45 ದಿನಗಳಲ್ಲಿ ಮಾಡಿದ ಸೇವೆಗೆ ಕೊಟ್ಟಿರುವ ಮತ ನಮಗೆ ತೃಪ್ತಿ ನೀಡಿದೆ. 10 ವರ್ಷ ಸೇವೆಗೆ 60 ಸಾವಿರ ಮತ, 45 ದಿನಕ್ಕೆ 16 ಸಾವಿರ ಮತ ನಮಗೆ ಸಂತೋಷ ನೀಡಿದೆ ಎಂದರು.
ನಮಗೆ ಮತ ನೀಡಿರುವ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ ಚುನಾವಣೆಗೆ ಸಾಕಷ್ಟು ಸಮಯ ಇದೆ. 5 ವರ್ಷ ಸತತವಾಗಿ ಸೇವೆ ಮಾಡಿ, ಪಕ್ಷ ಕಟ್ಟುವಂತಹ ಕೆಲಸ ಮಾಡುತ್ತೇವೆ. ಮತ್ತೆ ಜನರ ಬಳಿ ಬೆಂಬಲ ಕೇಳಿ, ಪಕ್ಷ ಕಟ್ಟಿ, ಪಕ್ಷವನ್ನು ಗಟ್ಟಿ ಮಾಡಿ, ಪಕ್ಷವನ್ನು ಅಧಿಕಾರಕ್ಕೆ ತರುವಂತಹ ಕೆಲಸವನ್ನು ನಿರಂತರವಾಗಿ ಮಾಡುವುದಾಗಿ ಹೇಳಿದರು.
ಮಾಜಿ ಶಾಸಕ ಎಂ ರಾಜಣ್ಣ ಮಾತನಾಡಿ, ರಾಜ್ಯದ ಜನತೆ ಕ್ಷೇತ್ರ ಮತ್ತು ರಾಜ್ಯ ಅಭಿವೃದ್ಧಿ ಆಗಬೇಕು ಎಂದು ಒಂದೇ ಪಕ್ಷಕ್ಕೆ ಬಹುಮತ ಕೊಟ್ಟಿದ್ದಾರೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಅತ್ಯಂತ ಪ್ರಬಲವಾಗಿ ಕಟ್ಟಿ ಬೆಳೆಸಬೇಕು ಅಂತ ನಾವು ಕಾಯ ವಾಚ ಮನಸ ತೀರ್ಮಾನ ಮಾಡಿದ್ದೇವೆ. ಆದರೆ ನಮ್ಮ ಶ್ರಮ ಮತವಾಗಿ ಪರಿವರ್ತನೆ ಆಗಲಿಲ್ಲ. ಆದರೆ ಜನರ ಪ್ರೀತಿ ವಿಶ್ವಾಸವನ್ನು ಸಂಪೂರ್ಣವಾಗಿ ಗಳಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೂಡ ಭಾರತೀಯ ಜನತಾ ಪಕ್ಷವನ್ನು ಸೀಕಲ್ ರಾಮಚಂದ್ರಗೌಡರ ನಾಯಕತ್ವದಲ್ಲಿ ನಮ್ಮ ಪಕ್ಷದ ಮುಖಂಡರು, ಪದಾಧಿಕಾರಿಗಳು ಒಟ್ಟಾಗಿ ಸೇರಿ ಪಕ್ಷವನ್ನು ಇನ್ನೂ ಸದೃಢವಾಗಿ ಕಟ್ಟಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬರುವ ಸವಾಲುಗಳನ್ನು ಸಂಪೂರ್ಣವಾಗಿ ನಾವು ಎದುರಿಸುತ್ತೇವೆ ಎಂದರು.
ಬಿಜೆಪಿ ಕಾರ್ಯಕರ್ತರು ಯಾವುದೇ ರೀತಿಯಲ್ಲಿ ಎದೆ ಗುಂದಬಾರದು. ಶಕ್ತಿಯುತವಾಗಿರಬೇಕು. ಜನರ ತೀರ್ಪಿಗೆ ತಲೆಬಾಗಲೇಬೇಕಾಗುತ್ತದೆ. ನಾವು 45 ದಿನಗಳಲ್ಲಿ ಪಕ್ಷ ಸಂಘಟನೆ ಮಾಡಿದ್ದೇವೆ. ಮನೆಮನೆಗೂ ನಾವು ಭೇಟಿ ಮಾಡಲು ಆಗಲಿಲ್ಲ. ಕಾರ್ಯಕರ್ತರನ್ನು ಭೇಟಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಮಗೆ ಸಾಕಷ್ಟು ಸಮಯ ಇರುವುದರಿಂದ ಪಕ್ಷವನ್ನು ಚೆನ್ನಾಗಿ ಕಟ್ಟುತ್ತೇವೆ. ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ಶಕ್ತಿಯನ್ನು ಇಲ್ಲಿ ಹೆಚ್ಚು ಮಾಡುವುದಾಗಿ ಹೇಳಿದರು.