Sidlaghatta : ತಾತ್ಕಾಲಿಕ ಗ್ಯಾರಂಟಿಗಳಿಗೆ ಮಾರು ಹೋಗದೆ, ಬದುಕನ್ನು ಕಟ್ಟಿಕೊಳ್ಳುವಂತ, ಬದುಕನ್ನು ಹಸನು ಮಾಡಿಕೊಳ್ಳುವಂತ ದೂರ ದೃಷ್ಠಿಯ ಮೋದಿ ಅವರು ನೀಡಿರುವ ಯೋಜನೆಗಳಿಗಾಗಿ ಮತ ಕೊಡಿ, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ ಎಂದು ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಮನವಿ ಮಾಡಿದರು.
ಶಿಡ್ಲಘಟ್ಟ ನಗರದಲ್ಲಿನ ಬಿಜೆಪಿ ಸೇವಾ ಸೌಧ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ ಮತ್ತು ಸಾಮಾಜಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದುಕನ್ನು ಕಟ್ಟಿಕೊಳ್ಳುವಂತ ಯೋಜನೆಗಳನ್ನು ಬಿಜೆಪಿಯಂತ ಪಕ್ಷ, ಮೋದಿ ಅವರಂತ ಸಮರ್ಥ ಪ್ರಧಾನ ಮಂತ್ರಿಗಳಿಂದಷ್ಟೆ ನೀಡಲು ಸಾಧ್ಯ. ಹಾಗಾಗಿ ಈ ಭಾರಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೋಣ ಎಂದು ಹೇಳಿದರು.
ಸರ್.ಎಂ.ವಿಶ್ವೇಶ್ವರಯ್ಯ ನವರಂತ ಮಹನೀಯರು ಹುಟ್ಟಿದ ಕ್ಷೇತ್ರವಿದು. ಕನ್ನಂಬಾಡಿಯನ್ನು ಕಟ್ಟಿ ಲಕ್ಷಾಂತರ ಕುಟುಂಬಗಳಿಗೆ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟವರು. ಅಂತಹ ಮಹನೀಯರು ಹುಟ್ಟಿದ ಚಿಕ್ಕಬಳ್ಳಾಪುರ ಇರಬಹುದು ಅಥವಾ ನೆರೆಯ ಕೋಲಾರವೇ ಇರಬಹುದು. ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಯನ್ನು ನಾವು ಗೆಲ್ಲಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಉದ್ಯೋಗಕ್ಕಾಗಿ ಬೇರೆ ಊರು ಬೇರೆ ಜಿಲ್ಲೆಗಳಿಗೆ ಹೋಗಿರುವ ನಮ್ಮ ಮಕ್ಕಳು ಮತ್ತೆ ನಮ್ಮೂರಿಗೆ ವಾಪಸ್ ಬರುವಂತಾಗಬೇಕು. ಇಲ್ಲೇ ನೆಲಸಬೇಕು, ಬದುಕನ್ನು ಕಟ್ಟಿಕೊಳ್ಳಬೇಕು, ಸಮಾಜವನ್ನೂ ಕಟ್ಟಬೇಕು ಎಂದರೆ ಮತ್ತೊಮ್ಮೆ ಮೋದಿ ಅವರು ಪ್ರಧಾನಿ ಆದರೆ ಮಾತ್ರ ಇದೆಲ್ಲವೂ ಸಾಧ್ಯ ಎಂದರು.
ಕಾಂಗ್ರೆಸ್ ಪಕ್ಷದ ಕ್ಷಣಿಕ ಲಾಭ ನೀಡುವಂತ ಗ್ಯಾರಂಟಿ ಯೋಜನೆಗಳಿಗೆ ಮಾರು ಹೋಗಬೇಡಿ. ಇಂದು ನಾಳೆಯೋ ಆ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ. ಆದರೆ ಮೋದಿ ಅವರು ಜಾರಿ ಮಾಡಿದ ಜನಪರ ಯೋಜನೆಗಳು ಎಂದಿಗೂ ನಿಲ್ಲುವುದಿಲ್ಲ ಎಂದರು.
ನಾವು ನೀವು ಶ್ರೀರಾಮನನ್ನು ಸ್ಮರಿಸುತ್ತಾ ದಿನವನ್ನು ಆರಂಭಿಸುತ್ತೇವೆ. ಆದರೆ ಶ್ರೀರಾಮನನ್ನು ಕಣ್ಣಾರೆ ಕಂಡಿಲ್ಲ. ನೋಡಿಲ್ಲ. ಹಾಗೆಯೆ ರಾಮ ರಾಜ್ಯ ಎಂಬುದನ್ನು ಕೇಳಿದ್ದೇವೆ ಓದಿದ್ದೇವೆ ಆದರೆ ಕಣ್ಣಾರೆ ಕಂಡಿಲ್ಲ ರಾಮ ರಾಜ್ಯದ ಸುಖವನ್ನೂ ಅನುಭವಿಸಿಯೂ ಇಲ್ಲ.
ಆದರೆ ರಾಮ ರಾಜ್ಯವನ್ನು ಕಟ್ಟಿ ರಾಮದ ಆದರ್ಶದಂತೆ ಆಡಳಿತವನ್ನು ನಡೆಸಿದ್ದು ಇದ್ದರೆ ಈ ಯುಗದಲ್ಲಿ ಅದು ಮೈಸೂರು ರಾಜ ಮನೆತನದ ಯದು ವಂಶಸ್ಥರು. ಅದೇ ಕಾರಣಕ್ಕೆ ಇರಬೇಕು ಮೈಸೂರಿನಿಂದಲೆ ಅಯ್ಯೋಧ್ಯೆಗೆ ಹೋದ ಕಲ್ಲಿನಿಂದಲೆ, ಮೈಸೂರಿನ ಶಿಲ್ಪಿ ಕೆತ್ತಿರುವ ಬಾಲ ರಾಮ ಪ್ರತಿಷ್ಠಾಪನೆಯಾಗಿದೆ. ಅಷ್ಟರ ಮಟ್ಟಿಗೆ ಅಯ್ಯೋಧ್ಯೆಗೂ ಮೈಸೂರಿಗೂ ಅವಿನಾಭವ ಸಂಬಂಧವಿದೆ ಎಂದು ಬಣ್ಣಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ರಾಜ್ಯದಲ್ಲಿ ನಮ್ಮ ಬಿಜೆಪಿಯು ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು ಒಂದೆರಡು ದಿನಗಳಲ್ಲಿ ನಾವು ಜೆಡಿಎಸ್‌ನೊಂದಿಗೆ ಸೇರಿ ಚುನಾವಣೆ ಮಾಡಬೇಕಾ ಇಲ್ಲವಾ ಬಿಜೆಪಿಗೆ ಕೆಲಸ ಮಾಡಬೇಕಾ ಎಂಬುದು ನಿರ್ಣಯವಾಗುತ್ತದೆ ಎಂದರು.
ಇಡೀ ದೇಶಾದ್ಯಂತ ಮೋದಿ ಅವರ ಅಲೆ ಇದೆ. ರಾಜ್ಯದ 28 ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು, ಅದಕ್ಕಾಗಿ ನಾವೆಲ್ಲರೂ ಒಟ್ಟಿಗೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕೆಂದರು.
ಮೋದಿ ಅವರು ಪ್ರಧಾನಿಯಾಗಿ ಒಬಿಸಿ ವರ್ಗಕ್ಕೆ ಮಾಡಿದ ಅನುಕೂಲಗಳು, ಯೋಜನೆಗಳನ್ನು ಪ್ರತಿ ಮತದಾರನಿಗೂ ಮನವರಿಕೆ ಮಾಡಿಕೊಟ್ಟು ಮುಖ್ಯವಾಗಿ ಈ ಭಾಗದ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಬೇಕೆಂದು ಮನವಿ ಮಾಡಿದರು.
ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ಅಶ್ವಿನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಂಜನೇಯಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪತಿ, ಕೆ.ವಿ.ಕೃಷ್ಣಮೂರ್ತಿ, ಜಿಲ್ಲಾ ಸಂಚಾಲಕಿ ಸುಗುಣ, ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ನಗರ ಘಟಕದ ಅಧ್ಯಕ್ಷ ನರೇಶ್, ಚಿಂತಾಮಣಿಯ ಮುಖಂಡ ವೇಣುಗೋಪಾಲ್ ಹಾಜರಿದ್ದರು.