Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಬಳಿ ಇರುವ ಬಾಲಾಜಿ ಕಲ್ಯಾಣ ಮಂಟಪಪದಲ್ಲಿ ಶಿಡ್ಲಘಟ್ಟ ತಾಲ್ಲೂಕು BJP ಘಟಕ, ಬಿಜೆಪಿ ಯುವ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರವನ್ನು (Blood Donation Camp) ಉದ್ಘಾಟಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ (Dr. K. Sudhakar) ಅವರು ಮಾತನಾಡಿದರು.
ಕಾಂಗ್ರೆಸ್‌ನಲ್ಲಿ ಸಿದ್ದರಾಮೋತ್ಸವ ಮಾಡಲಾಗುತ್ತದೆ. ಅಲ್ಲಿ ವ್ಯಕ್ತಿಪೂಜೆ ಮಾಡಲಾಗುತ್ತದೆ. ಆದರೆ ನಮ್ಮ ಬಿಜೆಪಿಯಲ್ಲಿ ವ್ಯಕ್ತಿಪೂಜೆಗೆ ಅವಕಾಶವಿಲ್ಲ. ನಮ್ಮಲ್ಲೇನಿದ್ದರೂ ಪಕ್ಷ ಪೂಜೆ ಹಾಗೂ ದೇಶ ಪೂಜೆ ಮಾತ್ರ ನಡೆಯುತ್ತದೆ ಎಂದರು.
ನಮ್ಮ ಡಬಲ್ ಇಂಜಿನ್ ಸರ್ಕಾರದ ಸಾಧನೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ನಡೆಸುತ್ತಿದ್ದೇವೆ. ಅಂದರೆ ಜನರ ಉತ್ಸವವನ್ನು ನಾವು ಮಾಡುತ್ತಿದ್ದು, ಅಲ್ಲಿ ಜನರೆ ಸಂಭ್ರಮಿಸುವಂತೆ ಮಾಡುತ್ತೇವೆಯೆ ಹೊರತು ವ್ಯಕ್ತಿಯನ್ನು ಮೆರೆಸುವುದಿಲ್ಲ ಎಂದು ಸಿದ್ದರಾಮೋತ್ಸವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರಕ್ತದಾನ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಕೊರತೆ ಕಾಡುತ್ತದೆ. ಕೋವಿಡ್ ಸಮಯದಲ್ಲಿ ಇಡೀ ದೇಶವನ್ನು ರಕ್ತದ ಕೊರತೆ ಕಾಡಿತ್ತು. ಅದು ಎಲ್ಲರಿಗೂ ಅನುಭವವೂ ಆಗಿದೆ. ಮತ್ತೊಮ್ಮೆ ಅಂತಹ ಪರಿಸ್ಥಿತಿ ಎದುರಾಗಬಾರದು ಎಂದರು.
ರಕ್ತದಾನ ಶಿಬಿರ ನಡೆಯಿತು. ವಿವಿಧ ಕ್ಷೇತ್ರದ 50 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ಯುವ ಘಟಕದ ರಾಜ್ಯಾಧ್ಯಕ್ಷ ಸಂದೀಪ್ ಕುಮಾರ್, ಭರತ್ ಕುಮಾರ್, ಕಂಬದಹಳ್ಳಿ ಸುರೇಂದ್ರಗೌಡ, ರಘು ಹಾಜರಿದ್ದರು.