Abbaludu, sidlaghatta : ತಜ್ಞರು ಶಿಫಾರಸ್ಸು ಮಾಡುವ ಕೀಟನಾಶಕಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕೀಟನಾಶಕಗಳನ್ನು ಬಳಸಬೇಡಿ. ಇದರಿಂದ ಸಕಾಲದಲ್ಲಿ ರೇಷ್ಮೆ ಹುಳು ಹಣ್ಣಾಗದೇ ಗೂಡು ಕಟ್ಟುವುದಿಲ್ಲ ಎಂದು ರೇಷ್ಮೆ ಉಪನಿರ್ದೇಶಕ ಡಿ.ಎಂ.ಆಂಜನೇಯಗೌಡ ಹೇಳಿದರು.
ತಾಲ್ಲೂಕಿನ ಅಬ್ಲೂಡು ಹಾಗೂ ಬೋದಗೂರು ಗ್ರಾಮದ ರೇಷ್ಮೆ ಬೆಳೆಗಾರರ ರೇಷ್ಮೆ ಹುಳು ಸಾಕಾಣಿಕೆ ಮನೆ ಮತ್ತು ತೋಟಗಳಿಗೆ ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ನರೇಂದ್ರಕುಮಾರ್ ರೊಂದಿಗೆ ಭೇಟಿ ನೀಡಿ ದ್ವಿತಳಿ ರೇಷ್ಮೆ ಬೆಳೆ ವೀಕ್ಷಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕ್ಷೇತ್ರ ಮಟ್ಟದಲ್ಲಿ ರೇಷ್ಮೆ ಬೆಳೆಗಳು ವಿಫಲವಾಗುತ್ತಿದ್ದು ಹಿಪ್ಪುನೇರಳೆ ಸೊಪ್ಪಿಗೆ ತಗಲುವ ರೋಗಗಳು ಮತ್ತು ಕೀಟಗಳಿಂದ 10 ರಿಂದ 12 ದಿನಗಳಾದರೂ ಹುಳು ಹಣ್ಣಗದೇ ಗೂಡು ಕಟ್ಟದೇ ರೇಷ್ಮೆ ಬೆಳೆ ವಿಫಲವಾಗುತ್ತಿದೆ. ರೈತರು ತಜ್ಞರು ಮತ್ತು ರೇಷ್ಮೆ ವಿಜ್ಞಾನಿಗಳು ಶಿಫಾರಸ್ಸು ಮಾಡುವ ಕೀಟನಾಶಗಳನ್ನು ಮಾತ್ರ ಬಳಸಲು ಮುಂದಾಗಬೇಕು. ಇಲಾಖೆ ಮತ್ತು ವಿಜ್ಞಾನಿಗಳಿಂದ ಗುಣಮಟ್ಟದ ರೇಷ್ಮೆಗೂಡು ಉತ್ಪಾದನೆ ಮಾಡಲು ಅಗತ್ಯವಿರುವ ತಾಂತ್ರಿಕ ಮಾಹಿತಿ ಪಡೆದು ರೇಷ್ಮೆ ಹುಳು ಸಾಕಾಣಿಕೆ ಮಾಡಿದರೆ ಉತ್ತಮ ಎಂದರು.
ಈ ಸಂದರ್ಭದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ರೇಷ್ಮೆ ವಿಸ್ತರಣಾಧಿಕಾರಿ ಶಾಂತರಸು, ತಾಂತ್ರಿಕ ಸಿಬ್ಬಂದಿ ಮುನಿರಾಜು, ಅಬ್ಲೂಡು ಗ್ರಾಮದ ದೇವರಾಜು, ಬೋದಗೂರು ಗ್ರಾಮದ ನಾಗೇಶ್, ವೆಂಕಟಶಾಮಿರೆಡ್ಡಿ ಹಾಜರಿದ್ದರು.