Bhaktarahalli, Sidlaghatta : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಭಕ್ತರಹಳ್ಳಿ ಗ್ರಾಮದಲ್ಲಿ ಶನಿವಾರ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭೆ ಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭೈರೇ ಗೌಡ ಮಾತನಾಡಿ, ಸಂಸಾರ ನಿರ್ವಹಣೆಯಲ್ಲಿ ಹಾಗೂ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾದದ್ದು. ಇವತ್ತು ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿದ್ದು ಮೊಬೈಲ್ ಇನ್ನಿತರ ವಿಚಾರದಲ್ಲಿ ಆಸಕ್ತಿ ಹೆಚ್ಚುತ್ತಿರುವುದು ವಿಷಾದನೀಯ ಎಂದರು.
ಪ್ರತಿ ದುರ್ಬಲ ಕುಟುಂಬದ ಅಬಿವೃದ್ಧಿಗೆ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಪರಮಪೂಜ್ಯ ಧರ್ಮಾಧಿಕಾರಿಗಳು ನೀಡಿದ ಸೇವೆ ಶ್ಲಾಘನೀಯವಾದದ್ದು ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಚೀಮಂಗಲ ಪ್ರೌಢಶಾಲೆಯ ಶಿಕ್ಷಕ ಡಾ. ಶಿವಕುಮಾರ್ ಮಾತನಾಡಿ, ಮನುಷ್ಯ ಸ್ನಾನ ಮಾಡುವುದರಿಂದ ಹೊರಗಿನ ಕೊಳೆ ಹೋಗುತ್ತದೆ. ಆದರೆ ನಿಷ್ಕಲ್ಮಷ ಮನಸ್ಸಿನ ಪ್ರಾರ್ಥನೆಯಿಂದ ಮನಸ್ಸಿನ ಒಳಗೆ ಇರುವ ಕೊಳೆ ಹೋಗುತ್ತದೆ. ಯಾರು ಬೇರೆಯವರ ಆನಂದಕ್ಕೆ ಕಾರಣನಾಗುತ್ತಾನೆ ಅವನೇ ದೇವರು ಎಂದು ಹೇಳಿದರು.
ನಿಸ್ವಾರ್ಥ ಸೇವೆಯಿಂದ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಪರಮ ಪೂಜ್ಯ ಹೆಗ್ಗಡೆಯವರ ಸಮಾಜಮುಖಿ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಿದೆ. ಇವತ್ತು ನಡೆದಾಡುವ ದೇವರಾದ ಸಿದ್ಧಗಂಗಾ ಸ್ವಾಮೀಜಿಯವರ ದಾಸೋಹ ದಿನ. ಆ ಪುಣ್ಯಪುರುಷರು ಕೂಡಾ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಅನ್ನದಾಸೋಹದ ಜೊತೆಗೆ ಅಕ್ಷರ ದಾಸೋಹ ನೀಡಿದವರು ಎಂದು ಸ್ಮರಿಸಿಕೊಂಡರು.. ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಮೂಲಕ ಅರ್ಥಿಕ ಸ್ವಾವಲಂಬನೆಯ ಜೊತೆಗೆ ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಕೆಲಸ ರಾಜ್ಯಾದ್ಯಂತ ಪೂಜ್ಯ ಹೆಗ್ಗಡೆಯವರು ಮಾಡುತ್ತಿದ್ದಾರೆ. ಎಲ್ಲಿ ದೇವರ ಸ್ಮರಣೆ ಭಜನೆ ಇದೆಯೋ ಅಲ್ಲಿ ವಿಭಜನೆ ಇಲ್ಲ. ಭಜನೆಯಿಂದ ಭಗವಂತನೆಡೆಗೆ ಸಾಗಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಪ್ರತಿನಿತ್ಯ ದೇವರ ಸ್ಮರಣೆಗೆ ಸ್ವಲ್ಪ ಸಮಯ ಮೀಸಲಿಡಬೇಕಾದ ಅನಿವಾರ್ಯತೆ ನಮಗಿದೆ ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಬಿ ವಿ ಮುನೇಗೌಡ, ಕಲ್ಪನಾ ಮುನಿರಾಜು, ಚಂದ್ರಕಲಾ ಭೈರೆಗೌಡ, ವಿ ಕೃಷ್ಣಪ್ಪ, ವೆಂಕಟೇಶ್, ಆರ್ ಮುನಿರಾಜು, ಕೆ ವಿಜಯ ಕುಮಾರ್, ಕೋಟೆ ಚನ್ನೇಗೌಡ, ಹೇಮಂತ್ ಕುಮಾರ್, ಶಶಿಕಲಾ ಲಕ್ಷ್ಮಿನಾರಾಯಣ್, ಮಂಜುನಾಥ್, ಚಿದಾನಂದ ಮೂರ್ತಿ, ದ್ಯಾವಮ್ಮ ನಾರಾಯಣ ಸ್ವಾಮಿ, ಮುನಿಕೃಷ್ಣಪ್ಪ, ಬಿ ಎ ರಮೇಶ್, ಬಿ ಸಿ ರಾಮಚಂದ್ರಪ್ಪ, ಆನಂದ್, ಮುನಿರಾಜು, ಪ್ರಶಾಂತ್, ಎ ಎನ್ ದೇವರಾಜು, ಎಚ್ ವಿ ಮುನಿರೆಡ್ಡಿ, ಬಿ ಕೆ ರಾಮಚಂದ್ರ, ಅಂಜನ್ ಕುಮಾರ್, ಮೇಲ್ವಿಚಾರಕಿ ಅನಿತಾ, ಸೇವಾಪ್ರತಿನಿಧಿ ಗಗನಾ ಹಾಜರಿದ್ದರು.