Bhaktarahalli, sidlaghatta : ಶಿಡ್ಲಘಟ್ಟ ತಾಲ್ಲುಕಿನ ಭಕ್ತರಹಳ್ಳಿಯ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ (Grama Sabha) ಪರಿಸರ ಭದ್ರತಾ ಪ್ರತಿಷ್ಟಾನ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಎನ್ ರಮೇಶ್ ಅವರು ಮಾತನಾಡಿದರು.
ಗ್ರಾಮ ಪಂಚಾಯತಿಯು ಗ್ರಾಮಗಳ ಸುವ್ಯವಸ್ಥೆಯನ್ನು ನಿರ್ವಹಿಸುವ ಪ್ರಜಾಸತ್ತಾತ್ಮಕ ಸಂಸ್ಥೆಯಾಗಿದೆ. ಬರೀ ರಸ್ತೆ, ಚರಂಡಿ ಮತ್ತು ಬೀದಿ ದೀಪಗಳು ಮತ್ತು ರಸ್ತೆಗಳನ್ನು ಸರಿ ಮಾಡುವುದರಲ್ಲೇ ನಮ್ಮ ಹಲವಾರು ಗ್ರಾಮ ಪಂಚಾಯಿತಿಗಳು ಸೀಮಿತವಾಗಿವೆ. ಸ್ಥಳೀಯ ಆಡಳಿತ ವ್ಯವಸ್ಥೆಯ ಆಧಾರಸ್ಥಂಭಗಳಾದ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳ ಬಲರ್ವಧನೆಯ ಬಗ್ಗೆ ನಾವ್ಯಾರು ಒತ್ತು ಕೊಡುತ್ತಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಆಧುನಿಕ ಸೇವೆಗಳು ಮತ್ತು ಸೌಕರ್ಯಗಳನ್ನು ಒದಗಿಸುವ ಅವಶ್ಯಕತೆಯಿದೆ.
ಗ್ರಾಮೀಣ-ನಗರ ವಲಸೆಯ ಸಮಸ್ಯೆಯನ್ನು ಪರಿಹರಿಸಲು ಗ್ರಾಮೀಣ ಜನರಿಗೆ ಉದ್ಯೋಗಾವಕಾಶಗಳು ಮತ್ತು ಜೀವನೋಪಾಯಗಳನ್ನು ಸೃಷ್ಟಿಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬುದನ್ನು ನಾವು ಅರಿತು ಕೆಲಸಮಾಡಬೇಕಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಜನ್ ಕುಮಾರ್ ಮಾತನಾಡಿ, ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಗಾಂಧೀಜಿಯವರು ಪಂಚಾಯತ್ ರಾಜ್ ವ್ಯವಸ್ಥೆಗೆ ಒತ್ತು ನೀಡಿದ್ದರು. ಸ್ವದೇಶಿ ವಸ್ತುಗಳನ್ನು ಅಳವಡಿಸಿಕೊಳ್ಳುವಂತೆ ನಿರಂತರವಾಗಿ ಜಾಗೃತಿ ಮೂಡಿಸಿದರು. ವಿದೇಶಿ ವಸ್ತುಗಳನ್ನು ಸೇವಿಸುವ ಬದಲು, ತಮ್ಮ ಅಗತ್ಯಗಳಿಗಾಗಿ ಹಳ್ಳಿಯಲ್ಲಿಯೇ ಆಹಾರ ಧಾನ್ಯಗಳು, ಹಾಲು, ಹಣ್ಣುಗಳು, ಹಸಿರು, ತರಕಾರಿಗಳು, ಹತ್ತಿ ಮತ್ತು ಖಾದಿಯನ್ನು ಉತ್ಪಾದಿಸಲು ಗಾಂಧಿ ಜನರಿಗೆ ಸಲಹೆ ನೀಡಿದ್ದರು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಮಾತನಾಡಿ, ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವುದು, ಬಡ ಕುಟುಂಬಗಳನ್ನು ತಲುಪುವುದು, ಶಿಕ್ಷಣ, ಆರೋಗ್ಯ, ವಸತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಕೇಂದ್ರ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಗಳಿಂದ ವಂಚಿತರಾದ ಜನರಿಗೆ ಪ್ರಯೋಜನ ನೀಡುವುದು ಗ್ರಾಮ ಸ್ವರಾಜ್ಯ ಮುಖ್ಯ ಉದ್ದೇಶವಾಗಿದೆ. ಅದರಂತೆ ನಮ್ಮ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಭಕ್ತರಹಳ್ಳಿಯ ವೃತ್ತ ಮತ್ತು ಪ್ರಮುಖ ಬೀದಿಗಳನ್ನು ಗ್ರಾಮ ಪಂಚಾಯಿತಿ ತಂಡದಿಂದ ಸ್ವಚ್ಛಗೊಳಿಸುವ ಕಾರ್ಯಕ್ರಮ ನಡೆಯಿತು. ಗ್ರಾಮದ ಸಾಮಾಜಿಕ ನಕ್ಷೆಯನ್ನು ಗ್ರಾಮಸ್ಥರು ಬಿಡಿಸಿ ನೈರ್ಮಲ್ಯ ಯೋಜನೆಯನ್ನು ರೂಪಿಸಿದರು. ಪಿಡಿಒ ಸ್ವಚ್ಚತೆ ನಿರ್ಹಹಣೆಯ ಕುರಿತು ಪ್ರತಿಜ್ಞೆಯನ್ನು ಮಾಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷೆ ಕಲ್ಪನ ಮುನಿರಾಜು, ಸದಸ್ಯರಾದ ಬಿ.ಚಿದಾನಂದಮೂರ್ತಿ, ಬಿ.ಆರ್.ಮಂಜುನಾಥ್, ದ್ಯಾವಮ್ಮ, ನರಸಮ್ಮ, ಮುನಿಕೃಷ್ಣಪ್ಪ, ಸಿಬ್ಬಂದಿ ನಾಗರಾಜ, ಹರೀಶ್, ಸವಿತ, ಅಂಬಿಕಾ, ಸವಿತ ಮತ್ತು ಜಲಗಾರರು ಹಾಗೂ ಸಂಪನ್ಮೂಲ ವ್ಯಕ್ತಿ ಮಾಲಾವತಿ ಹಾಜರಿದ್ದರು.