ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿಎಂವಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ “ಮೈಕ್ರೋ ಸಾಫ್ಟ್” ಕಂಪನಿಯು ಸ್ಮೈಲ್ ಫೌಂಡೇಶನ್ ಮುಖಾಂತರ ನೀಡಿರುವ 540 ದಿನಸಿ ಕಿಟ್ ಗಳನ್ನು ಅಗತ್ಯವಿರುವವರಿಗೆ ವಿತರಿಸಿ ಬಿಎಂವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿದರು.
ಕೋವಿಡ್-19 ಮಹಾಮಾರಿ ಯಿಂದ ಅತೀವ ಕಷ್ಟಕ್ಕೆ ಒಳಗಾಗಿರುವ ಭಕ್ತರಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಭಕ್ತರಹಳ್ಳಿ ಬಿಎಂವಿ ವಿದ್ಯಾಸಂಸ್ಥೆ ಯಿಂದ ಮತ್ತೊಮ್ಮೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದೇವೆ.
ವಿಶ್ವದ ಅತಿ ದೊಡ್ಡ ಸಾಫ್ಟ್ ವೇರ್ ದಿಗ್ಗಜ “ಮೈಕ್ರೋ ಸಾಫ್ಟ್” ಕಂಪನಿಯು ಸ್ಮೈಲ್ ಫೌಂಡೇಶನ್ ಮುಖಾಂತರ ಸುಮಾರು 15 ಟನ್ ದಿನಸಿಯನ್ನು ನೀಡಿದೆ. ಅವನ್ನು ನಾವು 540 ಕುಟುಂಬಗಳಿಗೆ ನೀಡುತ್ತಿದ್ದೇವೆ. 200 ಕುಟುಂಬಗಳಿಗೆ ಇಂದು ದಿನಸಿ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದೇವೆ. ಉಳಿದ 340 ಕಿಟ್ ಗಳ ಫಲಾನುಭವಿಗಳನ್ನು ಗುರುತಿಸಲಾಗಿದ್ದು ಮಳೆ ನಿಂತ ನಂತರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು.
ಇಂತಹ ಸಂಕಷ್ಟದಲ್ಲಿ ನೆರವು ನೀಡಿದ “ಮೈಕ್ರೋ ಸಾಫ್ಟ್” ಮತ್ತು “ಸ್ಮೈಲ್ ಫೌಂಡೇಶನ್” ಗಳಿಗೆ ನಾವುಗಳು ಋಣಿಯಾಗಿದ್ದೇವೆ ಎಂದು ಅವರು ತಿಳಿಸಿದರು.
ಪ್ರತಿಯೊಂದು ಕಿಟ್ ನಲ್ಲಿಯೂ 10 ಕೆಜಿ ಉತ್ತಮ ಅಕ್ಕಿ, 1 ಕೆಜಿ ಸಕ್ಕರೆ, 1 ಕೆಜಿ ತೊಗರಿ ಬೇಳೆ, 1 ಕೆಜಿ ಅಡುಗೆ ಎಣ್ಣೆ, 1 ಕೆಜಿ ರವೆ, 5 ಕೆಜಿ ಗೋದಿ ಹಿಟ್ಟು, 5 ಸೋಪ್ ಗಳು, 100 ಗ್ರಾಂ ಮೆಣಸಿನ ಪುಡಿ, 100 ಗ್ರಾಂ ಅರಿಶಿನ ಪುಡಿ, 15 ಸ್ಯಾನಿಟರಿ ಪ್ಯಾಡ್, 5 ಮಾಸ್ಕ್ ಗಳು, 1 ಕೆಜಿ ಉಪ್ಪು ಇವೆ. ಮಳೆ ಕಾರಣ ಶಾಲೆಗೆ ರಜೆ ಘೋಷಿಸಿದ್ದರೂ ಶಿಕ್ಷಕರೆಲ್ಲರೂ ಕಿಟ್ ಗಳನ್ನು ವಿತರಿಸುವಲ್ಲಿ ಸಹಕರಿಸಿದ್ದಾರೆ ಎಂದರು.